ರಾಮನಗರ: ಮನೆ ಮನೆಗೆ ನೀರು ಪೂರೈಸುವ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆ ಕಾಮಗಾರಿಯ ನಿಧಾನಗತಿಗೆ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಮಟ್ಟದ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಡಾ. ಸಿ.ಎನ್ . ಮಂಜುನಾಥ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಆರಂಭದಲ್ಲೇ ಜೆಜೆಎಂ ವಿಷಯ ಪ್ರಸ್ತಾಪವಾಯಿತು. ಕಾಮಗಾರಿ ಮಾಹಿತಿ ನೀಡಿದ ಜಿ.ಪಂ. ಎಂಜಿನಿಯರ್ ವೀರನಂಜೇಗೌಡ, ‘ಜಿಲ್ಲೆಯಲ್ಲಿ ಇದುವರೆಗೆ 989 ಕಾಮಗಾರಿಗಳು ಮುಗಿದಿದ್ದು, 600 ಪ್ರಗತಿಯಲ್ಲಿವೆ. ಈ ಸಾಲಿನಲ್ಲಿ ₹3,923 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಆ ಪೈಕಿ ₹3,833.11 ಕೋಟಿ ವೆಚ್ಚವಾಗಿದೆ’ ಎಂದರು.
ಕಾಮಗಾರಿ ಪ್ರಗತಿಗೆ ಆಶ್ಚರ್ಯ ವ್ಯಕ್ತಪಡಿಸಿದ ಮಂಜುನಾಥ್, ‘ಪಕ್ಕದ ತುಮಕೂರಿನಲ್ಲಿ ಶೇ 70–80ರಷ್ಟು ಜೆಜೆಎಂ ಕಾಮಗಾರಿ ಮುಗಿದಿದೆ. ರಾಮನಗರ ಜಿಲ್ಲೆಯಲ್ಲಿ ತೀರಾ ಹಿಂದುಳಿದಿದೆ. ಚನ್ನಪಟ್ಟಣದಲ್ಲಿ ಮಾತ್ರ ಶೇ 64ರಷ್ಟು ಕಾಮಗಾರಿ ಆಗಿದ್ದು, ಉಳಿದೆಡೆ ಕನಿಷ್ಠ ಶೇ 50ರಷ್ಟು ಸಹ ಆಗಿಲ್ಲ. ಯೋಜನೆ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು’ ಎಂದರು.
ನೋಟಿಸ್ ಕೊಡಿ:
‘ಆರಂಭದಲ್ಲಿ ಗುತ್ತಿಗೆ ಪಡೆದವರು ಕಾಮಗಾರಿ ವಿಳಂಬ ಮಾಡಿರುವುದು, ಒಬ್ಬರೇ 100ಕ್ಕೂ ಹೆಚ್ಚು ಕಡೆ ಕೆಲಸ ಮಾಡುತ್ತಿರುವುದರಿಂದ ಕಾಮಗಾರಿ ವಿಳಂಬವಾಗಿದೆ’ ಎಂದು ಎಂಜಿನಿಯರ್ ಹೇಳಿದರು. ಅದಕ್ಕೆ, ಮಂಜುನಾಥ್, ‘ವಿಳಂಬಕ್ಕೆ ಕಾರಣವೇನು? ಮೂರನೇ ವ್ಯಕ್ತಿ ಪರಿಶೀಲನೆ ತಡವಾಗಿದೆಯೇ? ತಡ ಮಾಡಿದ ಗುತ್ತಿಗೆದಾರರಿಗೆ ನೋಟಿಸ್ ಕೊಡಿ. ಯೋಜನೆ ತ್ವರಿತಕ್ಕೆ ಡಿ.ಸಿ ಮತ್ತು ಜಿ.ಪಂ ಸಿಇಒ ಜೊತೆ ಸಭೆ ನಡೆಸಿ’ ಎಂದು ಸೂಚಿಸಿದರು.
ಆಗ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ‘ನೋಟಿಸ್ ಜೊತೆಗೆ ದಂಡ ಸಹ ವಿಧಿಸಬೇಕು’ ಎಂದು ಸೂಚಿಸಿದರು. ‘ಈಗಾಗಲೇ 3 ನೋಟಿಸ್ ಕೊಟ್ಟಿದ್ದೇವೆ’ ಎಂದು ಅಧಿಕಾರಿ ಹೇಳಿದಾಗ, ‘ದಂಡ ವಿಧಿಸಿದರೆ ಕೆಲಸ ಮಾಡುತ್ತಾರೆ. ಮೊದಲು ಆ ಕೆಲಸ ಮಾಡಿ’ ಎಂದು ಸಂಸದರು ಹೇಳಿದರು.
ಕಡತಕ್ಕಿಂತ ಜೀವ ಮುಖ್ಯ:
‘ಹಾವು ಕಡಿತ ಪ್ರಕರಣಗಳಲ್ಲಿ ದೂರು ದಾಖಲಾಗುವವರೆಗೂ ಕಾಯಬೇಡಿ. ಕಡತಕ್ಕಿಂತ ಜೀವ ಮುಖ್ಯ. ಮೊದಲು ಚಿಕಿತ್ಸೆ ಕೊಡಿ. ನಂತರ ಕಡತದ ಕಡೆಗೆ ಗಮನ ಕೊಡಿ’ ಎಂದು ಸೂಚಿಸಿದರು. ‘ಚನ್ನಪಟ್ಟಣದಲ್ಲಿ ಉತ್ತಮ ಶವಾಗಾರವಿಲ್ಲ. ಇತ್ತೀಚೆಗೆ ನೆಲದ ಮೇಲೆ ಮಲಗಿಸಿದ್ದ ಶವವನ್ನು ಇರುವೆಗಳು ಮುತ್ತಿಕೊಂಡಿದ್ದವು’ ಎಂದು ಸಮಿತಿ ಸದಸ್ಯರೊಬ್ಬರು ಗಮನ ಸಳೆದರು.
‘ಜಿಲ್ಲೆಯಲ್ಲಿ ಉತ್ತಮ ಶವಾಗಾರದ ಜೊತೆಗೆ ಶೈತ್ಯಾಗಾರ ನಿರ್ಮಿಸಲು ಜಿ.ಪಂ. ವತಿಯಿಂದ ಕ್ರಮ ಕೈಗೊಳ್ಳಬಹುದೇ?’ ಎಂದು ಸಿಇಒ ಅನ್ಮೋಲ್ ಜೈನ್ ಅವರಿಗೆ ಸಂಸದರು ಕೇಳಿದರು. ನಿರ್ಮಾಣಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದರ ಮಾಹಿತಿಯೊಂದಿಗೆ ಪ್ರಸ್ತಾವ ಸಲ್ಲಿಸಿ ಎಂದು ಸಿಇಒ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು.
ಈ ಸಲದ ದಿಶಾ ಸಭೆಯತ್ತಲೂ ಜಿಲ್ಲೆಯ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸುಳಿಯಲಿಲ್ಲ. ಕೆಲ ಇಲಾಖೆಗಳ ಅಧಿಕಾರಿಗಳು ಸಹ ಗೈರಾಗಿದ್ದರು. ಸಭೆಗೆ ಪೂರ್ಣ ಮಾಹಿತಿಯೊಂದಿಗೆ ಬಾರದ ಕೆಲ ಅಧಿಕಾರಿಗಳು, ಸಂಸದರ ಪ್ರಶ್ನೆಗೆ ಉತ್ತರಿಸಲು ತಡವರಿಸಿದರು.
ದಿಶಾ ಸಮಿತಿ ಸದಸ್ಯರಾದ ರೇಖಾ, ರಾಜೇಶ್, ಶಿವಣ್ಣ, ಸುನೀತಾ, ಮಮತಾ, ಜಗದೀಶ್, ಸಿದ್ದಗೇಗೌಡ, ಶೋಭಾ, ಸಿದ್ದರಾಮು, ಡಿ. ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ, ಉಪ ವಿಭಾಗಾಧಿಕಾರಿ ಪಿ.ಕೆ. ಬಿನೊಯ್, ಜಿ.ಪಂ. ಯೋಜನಾ ನಿರ್ದೇಶಕ ಚಿಕ್ಕಸುಬ್ಬಯ್ಯ ಹಾಗೂ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.