ADVERTISEMENT

ರಾಮನಗರ ಜಿಲ್ಲಾಸ್ಪತ್ರೆಗೆ ಸಂಸದ ಡಾ. ಮಂಜುನಾಥ್ ಭೇಟಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 15:35 IST
Last Updated 8 ಅಕ್ಟೋಬರ್ 2024, 15:35 IST
ರಾಮನಗರ ಜಿಲ್ಲಾಸ್ಪತ್ರೆಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಮಂಗಳವಾರ ಭೇಟಿ ನೀಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಂಜುನಾಥ್ ಹಾಗೂ ಇತರರು ಇದ್ದಾರೆ
ರಾಮನಗರ ಜಿಲ್ಲಾಸ್ಪತ್ರೆಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಮಂಗಳವಾರ ಭೇಟಿ ನೀಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಂಜುನಾಥ್ ಹಾಗೂ ಇತರರು ಇದ್ದಾರೆ   

ರಾಮನಗರ: ನಗರದ ಜಿಲ್ಲಾಸ್ಪತ್ರೆಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಮಂಗಳವಾರ ದಿಢೀರ್ ಭೇಟಿ ನೀಡಿದರು. ಆಸ್ಪತ್ರೆಯ ಹೊರರೋಗಿ ವಿಭಾಗ ಸೇರಿದಂತೆ ಕೆಲ ವಿಭಾಗಗಳಿಗೆ ಭೇಟಿ ನೀಡಿದ ಅವರು, ರೋಗಿಗಳ ಆರೋಗ್ಯದ ಕುರಿತು ವಿಚಾರಿಸಿದರು. ನಂತರ ಡಯಾಲಿಸಿಸ್ ಘಟಕಕ್ಕೆ ತೆರಳಿ ಪರಿಶೀಲಿಸಿದರು.

ಇದೇ ವೇಳೆ, ಆಸ್ಪತ್ರೆಯಲ್ಲಿ ಬಿಜೆಪಿ ಕಾರ್ಯಕರ್ತರೊಬ್ಬರ ತಾಯಿ ದಾಖಲಾಗಿರುವ ವಿಷಯ ತಿಳಿದ ಅವರು, ವಾರ್ಡ್‌ಗೆ ತೆರಳಿ ಅವರನ್ನು ಮಾತನಾಡಿಸಿದರು. ರೋಗಿಯ ಆರೋಗ್ಯ ಸ್ಥಿತಿ ಕುರಿತು ವೈದ್ಯರಿಂದ ಮಾಹಿತಿ ಪಡೆದರು.

‘ಆಸ್ಪತ್ರೆಯ ಡಯಾಲಿಸಿಸ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದರು, ಹೃದಯ ತಪಾಸಣೆಗೆ ಅಗತ್ಯವಿರುವ ಎಕೊ ಯಂತ್ರ, ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಹಾಗೂ ಅಲ್ಟ್ರಾಸೌಂಡ್ ಯಂತ್ರ ಒದಗಿಸುವುದರ ಕುರಿತು ಚರ್ಚಿಸಿದರು. ಸಿಬ್ಬಂದಿ ಕೊರತೆ ನೀಗಿಸಲು ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಿರುವುದಾಗಿ ಹೇಳಿದರು’ ಎಂದು ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಂಜುನಾಥ್ ತಿಳಿಸಿದರು.

ADVERTISEMENT

ಖುಷಿ ತಂದ ಗೆಲುವು: ‘ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ನೀತಿಗಳ ವಿರುದ್ಧ ಹರಿಯಾಣ ಮತ್ತು ಪಂಜಾಬ್‌ನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆದಿತ್ತು. ಈಗ, ಅದೇ ಹರಿಯಾಣದಲ್ಲಿ ಬಿಜೆಪಿ ಮೂರನೇ ಸಲ ಗೆದ್ದಿದೆ. ಪ್ರಧಾನಿ ಮೋದಿ ಅವರು ಕೃಷಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಕಿಸಾನ್ ಸಮ್ಮಾನ್ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹಾಗಾಗಿ, ಹರಿಯಾಣದಲ್ಲಿ ಪಕ್ಷ ಗೆಲುವು ಸಾಧಿಸಿದೆ’ ಎಂದು ಹರಿಯಾಣ ಮತ್ತು ಜಮ್ಮು–ಕಾಶ್ಮೀರ ಚುನಾವಣಾ ಫಲಿತಾಂಶ ಕುರಿತ ಸುದ್ದಿಗಾರರ ಪ್ರಶ್ನೆಗೆ ಸಂಸದರು ಪ್ರತಿಕ್ರಿಯಿಸಿದರು.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಪಕ್ಷ ಬಹುಮತ ಗಳಿಸಲು ಸಾಧ್ಯವಾಗಿಲ್ಲ. ಅಲ್ಲಿನ ಜನರಿಗೆ ಇನ್ನೂ ವಾಸ್ತವ ಅರಿವಾಗಬೇಕಿದೆ. ಸದ್ಯ ಅಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟವು ಗೆಲುವು ಸಾಧಿಸಿದೆ. ರಾಜ್ಯದಲ್ಲಿ ಕಲಂ 370 ರದ್ದಾದ ಬಳಿಕ ಪರಿಸ್ಥಿತಿ ಬದಲಾಗಿದ್ದು, ಮುಂದೆ ಬಿಜೆಪಿ ಬೇರೂರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾರಾಯಣಸ್ವಾಮಿ, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಇದ್ದರು.

ಗ್ರಾ.ಪಂ. ನೌಕರರ ಹೋರಾಟಕ್ಕೆ ಬೆಂಬಲ

ಆಸ್ಪತ್ರೆ ಭೇಟಿ ಬಳಿಕ ಡಾ. ಸಿ.ಎನ್. ಮಂಜುನಾಥ್ ಅವರು ಜಿಲ್ಲಾದಿಕಾರಿ ಕಚೇರಿ ಸಮೀಪ ವಿವಿಧ ಬೇಡಿಕೆ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಸದಸ್ಯರನ್ನು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಬಳಿಕ ಮಾತನಾಡಿದ ಅವರು ‘ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು ಕಾಲಕಾಲಕ್ಕೆ ವೇತನ ಹೆಚ್ಚಳ ಮಾಡಬೇಕು. ನಿಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಇಲಾಖೆಯ ಸಚಿವರು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಚರ್ಚಿಸುವೆ’ ಎಂದು ಭರವಸೆ ನೀಡಿದರು.

ರಾಮನಗರ ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಸಂಘದ ಜಿಲ್ಲಾಧ್ಯಕ್ಷ ಬೆಟ್ಟಸ್ವಾಮಿಗೌಡ ಪ್ರಧಾನ ಕಾರ್ಯದರ್ಶಿ ಜಯಶಂಕರ್ ಉಪಾಧ್ಯಕ್ಷರಾದ ಉಮೇಶ್ ಶೋಭಾ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.