ADVERTISEMENT

ಸೈನಿಕರ ಆತ್ಮಸ್ಥೈರ್ಯಕ್ಕೆ ಮೃತ್ಯುಂಜಯ ಹೋಮ

ರಾಮನಗರದಲ್ಲಿ ಬಿಜೆಪಿ ವತಿಯಿಂದ ರಾಷ್ಟ್ರಧ್ವಜ ಹಿಡಿದು ಬೈಕ್ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 13:09 IST
Last Updated 2 ಮಾರ್ಚ್ 2019, 13:09 IST
ಶನಿವಾರ ಮೃತ್ಯಂಜಯ ಹೋಮ ನಡೆಸಲಾಯಿತು
ಶನಿವಾರ ಮೃತ್ಯಂಜಯ ಹೋಮ ನಡೆಸಲಾಯಿತು   

ರಾಮನಗರ : ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಅವರ ಕುಟುಂಬದವರ ಜತೆಗೂಡಿ ಮೃತ್ಯುಂಜಯ ಹೋಮ ನೆರವೇರಿಸುವುದರ ಜತೆಗೆ ವಿಂಗ್ ಕಮಾಂಡರ್ ಅಭಿನಂದನ್ ಮರಳಿ ತಾಯ್ನಾಡಿಗೆ ಬಂದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಶನಿವಾರ ಸಂಭ್ರಮಿಸಿದರು.

ಇಲ್ಲಿನ ವಿಜಯನಗರದ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಮೃತ್ಯಂಜಯ ಹೋಮ ನಡೆಯಿತು.
ದೊಡ್ಡಮುದವಾಡಿ ಲೋಕೇಶ್, ಕೆಂಚನಕುಪ್ಪೆ ಕುಮಾರಸ್ವಾಮಿ, ರಾವುಗುಂಡ್ಲು ಮಂಜೇಶ್ ಕುಮಾರ್ ಕುಟುಂಬ ಸೇರಿದಂತೆ 7 ಯೋಧರ ಕುಟುಂದ ಸದಸ್ಯರು ಹೋಮ ಹಾಗೂ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಆ ನಂತರ ನೂರಾರು ಯುವಕರು ರಾಷ್ಟ್ರಧ್ವಜ ಹಿಡಿದು ಬೈಕ್ ರ‍್ಯಾಲಿ ನಡೆಸಿದರು. ಇಲ್ಲಿನ ಎಂ.ಜಿ.ರಸ್ತೆ, ಹಳೇ ಬಸ್ ನಿಲ್ದಾಣ, ಐಜೂರು ವೃತ್ತ, ಕೆಂಪೇಗೌಡ ಸರ್ಕಲ್, ರಾಯರದೊಡ್ಡಿ, ವಿವೇಕಾನಂದನಗರದ ಮೂಲಕ ದೇಶದ ಪರವಾಗಿ ಘೋಷಣೆ ಕೂಗಿ ಸಂಭ್ರಮ ಆಚರಣೆ ಮಾಡಿದರು.

ADVERTISEMENT

ಪಾಕಿಸ್ತಾನ ದೇಶದವರು ಉಗ್ರಗಾಮಿಗಳಿಗೆ ಬೆಂಬಲ ನೀಡಿ, ಭಯೋತ್ಪಾದನೆ ಎಂಬ ಪಿಡುಗಿನ ಪೋಷಣೆ ಮಾಡುತ್ತಿದೆ. ಆದ್ದರಿಂದ ಗಡಿ ಪ್ರದೇಶದಲ್ಲಿ ವಾತಾವರಣ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಸರಿಯಾದ ಬುದ್ಧಿ ಕಲಿಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್ ತಿಳಿಸಿದರು.

ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ವರದರಾಜುಗೌಡ ಮಾತನಾಡಿ, ದೇಶವನ್ನು ಹಗಲಿರುಳು ಕಾಯುತ್ತಿರುವ ಸೈನಿಕರ ಕುಟುಂಬದವರಿಗೆ ಧೈರ್ಯ ತುಂಬಲು ಇಂದು ಯುವ ಮೋರ್ಚಾ ವತಿಯಿಂದ ಸೈನಿಕರ ಕುಟುಂಬದ ಸದಸ್ಯರ ಸಮ್ಮಖದಲ್ಲಿ ಮೃತ್ಯುಂಜಯ ಹೋಮ ನೆರವೇರಿಸಲಾಗುತ್ತಿದೆ ಎಂದರು.

ಜತೆಗೆ ಹೆಮ್ಮೆಯ ಯೋಧ ಅಭಿನಂದನ್ ಅವರು ಮರಳಿ ಭಾರತಕ್ಕೆ ಬಂದಿರುವುದರ ಸಂಕೇತವಾಗಿ ವಿಜಯೋತ್ಸವ ಆಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನಗರಸಭಾ ಸದಸ್ಯರಾರ ಪಿ. ರವಿಕುಮಾರ್, ನಾಗೇಶ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್‌ಗೌಡ, ಮುಖಂಡರಾದ ಸದಾನಂದ, ಜಯರಾಮಯ್ಯ, ಪದ್ಮನಾಭ, ಪಿ. ಶಬರಿ, ಮಂಜು, ಶಂಕರನಾರಾಯಣರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.