
ರಾಮನಗರ: ಸರ್ಕಾರಿ ನೌಕರರು ಎಂದು ಪರಿಗಣಿಸುವುದು ಸೇರಿದಂತೆ ವಿವಿಧ ಹತ್ತು ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಜ್ಜಾಗಿದ್ದ ಪೌರ ನೌಕರರ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಈಡೇರಿಸುವುದಾಗಿ ಪೌರಾಡಳಿತ ಸಚಿವರು ಭರವಸೆ ನೀಡಿದ್ದಾರೆ’ ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆರ್. ನಾಗರಾಜು ಹೇಳಿದರು.
‘ವಿವಿಧ ಬೇಡಿಕೆ ಈಡೇರಿಕೆಗಾಗಿ ಸಂಘವು ಮೇ ತಿಂಗಳಲ್ಲಿ ಮುಷ್ಕರ ನಡೆಸಿತ್ತು. ಆಗ ಸಂಘದ ಜೊತೆ ಸಭೆ ನಡೆಸಿದ್ದ ಸಚಿವರು, ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಆದರೆ, ಬೇಡಿಕೆ ಮಾತ್ರ ಈಡೇರಿರಲಿಲ್ಲ. ಹಾಗಾಗಿ, ಮತ್ತೆ ಮುಷ್ಕರಕ್ಕೆ ಮುಂದಾಗಿದ್ದ ಸಂಘದ ಜೊತೆ ಸಚಿವ ರಹೀಂ ಖಾನ್ ಅವರು ಮಾತುಕತೆ ನಡೆಸಿದ್ದಾರೆ’ ಎಂದು ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ, ಜಂಟಿ ನಿರ್ದೇಶಕಿ ಡಾ. ಗೀತಾ ಎನ್.ಆರ್., ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ ಡಾ. ಗೋಪಾಲಕೃಷ್ಣ ಬಿ., ಸಂಘದ ರಾಜ್ಯಾಧ್ಯಕ್ಷ ಕೆ. ಪ್ರಭಾಕರ್, ನಾನು ಸೇರಿದಂತೆ ಇತರ ಪದಾಧಿಕಾರಿಗಳು ಭಾಗವಹಿಸಿದ್ದೆವು’ ಎಂದರು.
‘ಸಂಘದ ಬೇಡಿಕೆಗಳನ್ನು ಈಡೇರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತಂದಿರುವುದಾಗಿ, ಅವರೂ ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಸಚಿವರು ಸಭೆಗೆ ತಿಳಿಸಿದರು. ಕೆಲ ಬೇಡಿಕೆಗಳಿಗೆ ಸ್ಪಂದಿಸಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕಿರುವುದರಿಂದ ಕಾಲಾವಕಾಶ ಕೋರಿದ್ದರು. ಇದೀಗ, ಆರ್ಥಿಕ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ’ ಎಂದು ತಿಳಿಸಿದರು.
‘ಒಂದು ತಿಂಗಳೊಳಗೆ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿರುವ ಸಚಿವರು, ಗಡುವಿನೊಳಗೆ ನ್ಯಾಯಯುತವಾದ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮತ್ತೆ ರಾಜ್ಯದಾದ್ಯಂತ ಸಂಘದ ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ವಿ. ವೆಂಕಟೇಶ್, ರಾಮನಗರ ಶಾಖೆ ಅಧ್ಯಕ್ಷ ದೇವೇಂದ್ರ, ಪ್ರಧಾನ ಕಾರ್ಯದರ್ಶಿ ಕೊಲ್ಲಾಪುರಿ, ಗೌರವಾಧ್ಯಕ್ಷ ನಟರಾಜೇಗೌಡ, ಮುಖಂಡರಾದ ರಾಮಣ್ಣ, ರಾಮಸಂಜೀವಯ್ಯ, ಕೆ.ಎಸ್. ನಾಗರಾಜ್, ಮುತ್ತಣ್ಣ, ಪಿ. ನರಸಿಂಹ, ಹಾಗೂ ಇತರರು ಇದ್ದರು.
ಸಂಘದ ಪ್ರಮುಖ ಬೇಡಿಕೆಗಳೇನು ?
* ಪೌರ ಸೇವಾ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು.
* ಪೌರ ನೌಕರರಿಗೆ ಜ್ಯೋತಿ ಸಂಜೀವಿನಿ ಕೆಜಿಐಡಿ ಜಿಪಿಎಫ್ ನೀಡಬೇಕು.
* ಹೊರಗುತ್ತಿಗೆ ನೇರ ನೇಮಕಾತಿ ನೇರ ಪಾವತಿ ನೀರು ಸರಬರಾಜು ಸಹಾಯಕರು ವಾಹನ ಚಾಲಕರು ಬೀದಿದೀಪ ನಿರ್ವಹಣೆಗಾರರು ಲೋಡರ್ಸ್ ಕ್ಲೀನರ್‌ಗಳು ಯುಜಿಡಿ ಸಹಾಯಕರು ಕಂಪ್ಯೂಟರ್ ಆಪರೇಟರ್‌ಗಳು ದಿನಗೂಲಿ ಮತ್ತು ಕ್ಷೇಮಾಭಿವೃದ್ಧಿ ನೌಕರರು ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರು ಸೇರಿದಂತೆ ವಿವಿಧ ವೃಂದಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಕಾಯಂಗೊಳಿಸಬೇಕು.
* ಪೌರ ಕಾರ್ಮಿಕರಿಗೆ ಸ್ಥಳೀಯ ಸಂಸ್ಥೆಗಳೇ ತಮ್ಮ ನಿಧಿಯಿಂದ ವೇತನ ಭರಿಸಬೇಕೆಂಬ ಆದೇಶ ರದ್ದುಪಡಿಸಿ ಸರ್ಕಾರದ ಎಸ್‌ಎಫ್‌ಸಿ (ರಾಜ್ಯ ಹಣಕಾಸು ಆಯೋಗ) ಮುಕ್ತನಿಧಿಯಿಂದ ವೇತನ ಪಾವತಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.