
ಕನಕಪುರ: ಕೊಲೆ ಆರೋಪಿಗಳ ಕುಟುಂಬದವರು ಗ್ರಾಮಕ್ಕೆ ಬರಬಾರದು ಎಂದು ಎಚ್ಚರಿಕೆ ನೀಡಿ ಗ್ರಾಮ ಪ್ರವೇಶ ತಡೆಯಲು ಪ್ರಯತ್ನಿಸಿದ ಘಟನೆ ಹೊಂಗಾಣಿದೊಡ್ಡಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದಲ್ಲಿ ಜಮೀನು ಮತ್ತು ನಿವೇಶನ ವಿವಾದ ಹಿನ್ನೆಲೆಯಲ್ಲಿ ಈಚೆಗೆ ಕಾಂಗ್ರೆಸ್ ಮುಖಂಡ ಮತ್ತು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಂಜೇಶ್ ಅವರ ಕೊಲೆಯಾಗಿತ್ತು. ಈ ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ಗ್ರಾಮದಲ್ಲಿ ಕೊಲೆ ಸೇಡು ತಣ್ಣಗಾಗಿರಲಿಲ್ಲ. ಕೊಲೆ ಆರೋಪಿಗಳ ಮನೆಗಳು ಧ್ವಂಸವಾಗಿದ್ದವು ಮತ್ತು ಕೃಷಿ ಬೆಳೆಗಳು ನಾಶವಾಗಿದ್ದವು. ಇದರಿಂದ ಭಯಗೊಂಡ ಕುಟುಂಬಗಳು ಗ್ರಾಮವನ್ನು ತೊರೆದಿದ್ದವು.
ಶುಕ್ರವಾರ ಬೆಳಗ್ಗೆ ಗ್ರಾಮದ ಚಿಕ್ಕಣ್ಣ (78) ಎಂಬುವರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯಲ್ಲಿ ಕೊಲೆ ಆರೋಪಿಗಳ ಕುಟುಂಬದ ಸದಸ್ಯರು ಪಾಲ್ಗೊಳ್ಳಬೇಕಿತ್ತು. ಆರೋಪಿಗಳ ಕುಟುಂಬದವರು ಗ್ರಾಮ ಪ್ರವೇಶಿಸುವಾಗ ನಂಜೇಶ್ ಅವರ ಕುಟುಂಬದವರು ಹಲ್ಲೆ ನಡೆಸುತ್ತಾರೆ ಎಂಬ ಭಯದಿಂದ ಮುಂಚಿತವಾಗಿಯೇ ಸಬ್ ಇನ್‌ಸ್ಪೆಕ್ಟರ್ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಅವರಿಗೆ ರಕ್ಷಣೆ ಕೋರಿದ್ದರು. 50 ಮಂದಿ ಪೊಲೀಸ್ ಸಿಬ್ಬಂದಿಯನ್ನು ಗ್ರಾಮದಲ್ಲಿ ನಿಯೋಜಿಸಲಾಗಿತ್ತು.
ನಿರೀಕ್ಷೆಯಂತೆ ಆರೋಪಿಗಳ ಕುಟುಂಬದವರು ಗ್ರಾಮ ಪ್ರವೇಶಿಸುತ್ತಿದ್ದಂತೆ ನಂಜೇಶ್ ಅವರ ತಾಯಿ, ತಂಗಿ, ಮಕ್ಕಳು ಮತ್ತು ಸಂಬಂಧಿಕರು ಗಲಭೆ ಮಾಡಲು ಪ್ರಾರಂಭಿಸಿ ಗ್ರಾಮ ಪ್ರವೇಶವನ್ನು ತಡೆಯಲು ಪ್ರಯತ್ನಿಸಿದರು. ಪೊಲೀಸರ ಮುಂದೆಯೇ ಕೊಲೆ ಸೇಡು ತೀರಿಸಿಕೊಳ್ಳುವುದಾಗಿ ಕೂಗಾಡಿದರು. ಇದರಿಂದ ಗ್ರಾಮದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು.
ಅಂತ್ಯಕ್ರಿಯೆಗೆ ಬಂದವರಿಗೆ ತೊಂದರೆ ಕೊಡುವುದು ಮತ್ತು ಶಾಂತಿ ಭಂಗ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಸೂಚಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.
ಪೊಲೀಸರ ಭದ್ರತೆಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಗ್ರಾಮಕ್ಕೆ ಬಂದಿದ್ದ ಆರೋಪಿಗಳ ಕುಟುಂಬದವರನ್ನು ಪೊಲೀಸರು ಸುರಕ್ಷಿತವಾಗಿ ಗ್ರಾಮದಿಂದ ಹೊರಗೆ ಕರೆದೊಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.