ADVERTISEMENT

ರಾಮನಗರ | ಬೇಸಿಗೆಗೆ ಈ ಗತಿಯಾದರೆ, ಮಳೆಗಾಲದ ಕತೆ ಏನು?

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ l ಸಂಗನಬಸವನದೊಡ್ಡಿ ಅಂಡರ್‌ಪಾಸ್‌ನಲ್ಲಿ ತುಂಬಿಕೊಂಡ ಮಳೆ ನೀರು l ಪ‍್ರಯ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 5:33 IST
Last Updated 19 ಮಾರ್ಚ್ 2023, 5:33 IST
ಸಂಗನಬಸವನದೊಡ್ಡಿ ಅಂಡರ್‌ಪಾಸ್‌ ಶನಿವಾರ ಮುಂಜಾನೆ ಭಾಗಶಃ ಜಲಾವೃತಗೊಂಡಿರುವುದು
ಸಂಗನಬಸವನದೊಡ್ಡಿ ಅಂಡರ್‌ಪಾಸ್‌ ಶನಿವಾರ ಮುಂಜಾನೆ ಭಾಗಶಃ ಜಲಾವೃತಗೊಂಡಿರುವುದು   

ರಾಮನಗರ: ಪ್ರಧಾನಿ ಮೋದಿ ಈಚೆಗೆ ಲೋಕಾರ್ಪಣೆ ಮಾಡಿದ ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇ ಶುಕ್ರವಾರ ತಡರಾತ್ರಿ ಸುರಿದ ಸಣ್ಣ ಮಳೆಗೆ ಜಲಾವೃತವಾಗಿದೆ.

ವಾಹನಗಳು ನೀರಿನಲ್ಲಿ ಮುಳುಗಿ, ಸರಣಿ ಅಪಘಾತಗಳಾಗಿ ಸವಾರರು ಹೈರಾಣಾದರು. ‘ಮೈಸೂರಿನಿಂದ ಬರಬೇಕಾದರೆ ಇಲ್ಲಿನ ಮಳೆನೀರಿನಿಂದಾಗಿ ನನ್ನ ಕಾರಿನ ಎಂಜಿನ್‌ವರೆಗೂ ನೀರು ತುಂಬಿ ಗಾಡಿ ಇದ್ದಕ್ಕಿದ್ದಂತೆ ಬಂದ್‌ ಆಯಿತು. ನಿಂತಿದ್ದ ಗಾಡಿಗೆ ಹಿಂದಿನಿಂದ ಲಾರಿ ಡಿಕ್ಕಿಯಾಗಿ ಕಾರು ಭಾಗಶಃ ಜಖಂ ಆಗಿದೆ. ಈ ನಷ್ಟವನ್ನು ಯಾರು ತುಂಬಿಕೊಡುತ್ತಾರೆ? ’ ಎಂದು ಬೆಂಗಳೂರಿನ ರಾಜಾಜಿನಗರ ನಿವಾಸಿ ವಿಕಾಸ್ ಎಂಬುವರು ಪ್ರಶ್ನಿಸಿದರು.

‘ರಸ್ತೆ ಕಾಮಗಾರಿ ಸಂಪೂರ್ಣ ಮುಕ್ತಾಯ ಆಗಿಲ್ಲ ಎಂದ ಮೇಲೆ ಪ್ರಧಾನಿ ಮೋದಿ ಅವರನ್ನು ಕರೆಯಿಸಿ ಯಾಕೆ ಉದ್ಘಾಟಿಸಬೇಕಿತ್ತು. ಇನ್ನೊಂದೆರಡು ತಿಂಗಳು ಕಾದಿದ್ದರೆ ಏನಾಗುತ್ತಿತ್ತು? ಎಲ್ಲದಕ್ಕೂ ಮುಂಚೆ ಟೋಲ್‌ ಆರಂಭಿಸಿದ್ದಾರೆ. ಈಗ ಅವರೇ ಪರಿಹಾರ ಕಟ್ಟಿಕೊಡಬೇಕು. ಹಾಳಾದ ಕಾರನ್ನು ರಿಪೇರಿ ಮಾಡಿಸಿಕೊಡುವಂತೆ ಇಂದೇ ಮುಖ್ಯಮಂತ್ರಿ ಮನೆ ಮುಂದೆ ಹೋಗಿ ನ್ಯಾಯ ಕೇಳುತ್ತೇನೆ’ ಎಂದು ಅವರು ಹೇಳಿದರು.

ADVERTISEMENT

ಅಂಡರ್‌ಪಾಸ್‌ಗಳಲ್ಲಿ ಸಮಸ್ಯೆ: 118 ಕಿ.ಮೀ. ಉದ್ದದ ದಶಪಥ ಹೆದ್ದಾರಿಯ ಮಾರ್ಗ ಮಧ್ಯದಲ್ಲಿ ಬರುವ ಗ್ರಾಮಗಳ ಜನರ ಓಡಾಟಕ್ಕಾಗಿ ಹೆದ್ದಾರಿ ಪ್ರಾಧಿಕಾರವು ಒಟ್ಟು 89 ಅಂಡರ್‌ಪಾಸ್‌ ಹಾಗೂ ಮೇಲ್ಸೇತುವೆ ನಿರ್ಮಿಸಿದೆ. ಅಂಡರ್‌ಪಾಸ್‌ ಇರುವಲ್ಲಿ ನೀರು ನಿಲ್ಲುವುದು ಸಾಮಾನ್ಯವಾಗಿದೆ. ಮಳೆ ನೀರು ಹರಿದುಹೋಗಲು ವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಿಸದೇ ಇರುವುದು ಸಮಸ್ಯೆಗೆ ಕಾರಣವಾಗಿದೆ.

ಮಳೆಯಿಂದ ಸಮಸ್ಯೆ ಉಂಟಾಗಿದ್ದ ಕಡೆಗಳಲ್ಲಿ ದುರಸ್ತಿ ಕಾಮಗಾರಿಗಳನ್ನು ಕೈಗೊಂಡಿದ್ದು, ಸದ್ಯ ಎಲ್ಲಿಯೂ ಸಮಸ್ಯೆ ಆಗದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀಧರ್ ಈಚೆಗಷ್ಟೇ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.

ಜಲಾವೃತ್ತ ಇದೇ ಮೊದಲಲ್ಲ!: ಸಂಗನಬಸವನದೊಡ್ಡಿ ಅಂಡರ್‌ಪಾಸ್‌ ಜಲಾವೃತಗೊಳ್ಳುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುರಿದ ಭಾರಿ ಮಳೆಗೆ ಇಡೀ ಅಂಡರ್‌ಪಾಸ್‌ ಮುಳುಗಿದ್ದು, ಹಲವು ಅಡಿಗಳವರೆಗೂ ನೀರು ನಿಂತಿತ್ತು. ಸಾಕಷ್ಟು ವಾಹನಗಳು ಇದರಿಂದ ಕೆಟ್ಟು ನಿಂತಿದ್ದವು. ನಂತರದಲ್ಲಿ ಈ ಅಂಡರ್‌ಪಾಸ್‌ನಲ್ಲಿ ಕೆಲವು ದಿನಗಳವರೆಗೆ ವಾಹನ ಸಂಚಾರವನ್ನು ಬಂದ್ ಮಾಡಿ ದುರಸ್ತಿ ಕಾಮಗಾರಿ ನಡೆಸಲಾಗಿತ್ತು. ಅಂಡರ್‌ಪಾಸ್‌ ಅತ್ಯಂತ ತಗ್ಗು ಪ್ರದೇಶದಲ್ಲಿ ನಿರ್ಮಾಣವಾಗಿದೆ. ಸ್ವಲ್ಪ ಮಳೆಯಾದರೂ ನೀರು ನುಗ್ಗಿ ಬರುತ್ತಿರುವುದರಿಂದ ಸಮಸ್ಯೆಯಾಗಿದೆ.

ಕೈಗಾರಿಕೆ, ಉದ್ಯಮದ ಮೇಲೆ ಪರಿಣಾಮ: ಬೆಂಗಳೂರು–ಮೈಸೂರು ಹೆದ್ದಾರಿ ಪೂರ್ಣವಾಗಿ ನಿರ್ಮಾಣ ಆಗದೇ ಟೋಲ್‌ ಸಂಗ್ರಹಿಸುತ್ತಿರುವುದು ಸರಿಯಲ್ಲ. ಪ್ರಯಾಣಿಸುವ ದೂರಕ್ಕೆ ಕಿಲೋ ಮೀಟರ್‌ಗೆ ಅನುಗುಣವಾಗಿ ಟೋಲ್ ಸಂಗ್ರಹಿಸುವುದು ಸೂಕ್ತ. ಸರ್ವೀಸ್‌ ರಸ್ತೆಗಳನ್ನು ಪೂರ್ಣಗೊಳಿಸದೇ ಟೋಲ್ ಸಂಗ್ರಹಿಸಲಾಗುತ್ತಿದೆ. ಇದು ಕೈಗಾರಿಕೆ ಮತ್ತು ಉದ್ಯಮ ವಲಯಗಳ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಬೆಲೆ ಏರಿಕೆಗೆ ಕಾರಣವಾಗಲಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ. ಗೋಪಾಲ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.