ADVERTISEMENT

ಎಚ್‌ಡಿಕೆ ಕುರಿತು ಹಗುರವಾಗಿ ಮಾತಾಡಬೇಡಿ: ನಾಗರಾಜು ಬಿ.ಟಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 14:14 IST
Last Updated 20 ಫೆಬ್ರುವರಿ 2025, 14:14 IST
ಕನಕಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜು ಬಿ.ಟಿ ಮಾತನಾಡಿದರು
ಕನಕಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜು ಬಿ.ಟಿ ಮಾತನಾಡಿದರು   

ಕನಕಪುರ: ರಾಜ್ಯಸಭಾ ಸದಸ್ಯ ಎಚ್‌.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಟೀಕೆ ಮಾಡಿದರೆ ನಾನು ದೊಡ್ಡ ನಾಯಕನಾಗುತ್ತೇನೆ ಎಂಬ ಭ್ರಮೆಯಲ್ಲಿ ಇಕ್ಬಾಲ್ ಹುಸೇನ್ ಮಾತನಾಡುತ್ತಿದ್ದಾರೆ. ಅವರು ಭ್ರಮೆಯಿಂದ ಆಚೆ ಬಂದು ನಮ್ಮ ನಾಯಕರ ಬಗ್ಗೆ ಮಾತನಾಡುವುದನ್ನು ಬಿಡಬೇಕೆಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜು ಬಿ.ಟಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್‌.ಡಿ.ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯನ್ನು ರಾಜ್ಯದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಹಾರೋಹಳ್ಳಿಯನ್ನು ನೂತನ ತಾಲ್ಲೂಕನ್ನಾಗಿ ಮಾಡಿದ್ದಾರೆ. ಮೊದಲ ಬಾರಿಗೆ ಶಾಸಕರಾಗಿರುವ ಇಕ್ಬಾಲ್ ಹುಸೇನ್ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಸಾತನೂರನ್ನು ತಾಲ್ಲೂಕು ಕೇಂದ್ರ ಮಾಡಬೇಕೆಂದು ಮೂರು ದಶಕದಿಂದಲೂ ಜನ ಹೋರಾಟ ಮಾಡುತ್ತಿದ್ದಾರೆ. ಆದರೆ, ನಿಮ್ಮ ನಾಯಕರು ಏಕೆ ಸಾತನೂರನ್ನು ನೂತನ ತಾಲ್ಲೂಕಾಗಿ ಮಾಡುತ್ತಿಲ್ಲ ಎಂದು ಇಕ್ಬಾಲ್ ಹುಸೇನ್ ಅವರನ್ನು ಪ್ರಶ್ನಿಸಿದರು.

ADVERTISEMENT

ಎಲ್ಲೆಡೆ ಎಚ್‌.ಡಿ.ದೇವೇಗೌಡ ಮತ್ತು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಕೊಡುಗೆ ಬಗ್ಗೆ ಮಾತನಾಡುತ್ತೀರಿ ಇಗ್ಗಲೂರು ಬ್ಯಾರೇಜ್ ಮತ್ತು ಹಾರೋಬೆಲೆ ಡ್ಯಾಂ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು ಯಾರು? ದೇವೇಗೌಡರು ತಮಗೆ ಸಿಕ್ಕ ಅವಕಾಶದಲ್ಲಿ ಶಾಶ್ವತವಾದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ನಿಮ್ಮ ಅಭಿವೃದ್ಧಿ ಕೆಲಸಗಳು ಏನು ಎಂದರು.

ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಹಾರೋಹಳ್ಳಿ ಬೃಹತ್ ಕೈಗಾರಿಕಾ ಪ್ರದೇಶ ಆಗಿರುವುದನ್ನು ಮರೆತಿದ್ದೀರಿ. ಹಾರೋಹಳ್ಳಿ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು? ಚುನಾವಣೆಯಲ್ಲಿ ಗಿಫ್ಟ್ ಕೂಪನ್ ಕೊಟ್ಟು ವಂಚಿಸಿರುವುದೇ ನಿಮ್ಮ ಸಾಧನೆ ಅಲ್ಲವೇ ಎಂದು ಟೀಕಿಸಿದರು.

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿದ್ದರು, ನಿಮ್ಮ ಸರ್ಕಾರದಲ್ಲಿ ನಿಮ್ಮ ನಾಯಕರ ಕೊಡುಗೆ ಏನು? ಕುಮಾರಸ್ವಾಮಿ ಅವರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಡಿ ಎಂದು ಎಚ್ಚರಿಸಿದರು.

ನಾಗರಾಜು, ಅನು ಕುಮಾರ್, ಮಂಜುನಾಥ್, ಅಶೋಕ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.