ADVERTISEMENT

ಉದ್ಯೋಗ ಖಾತ್ರಿಯಲ್ಲಿ ಅಕ್ರಮದ ವಾಸನೆ! 27ನೇ ಸ್ಥಾನಕ್ಕೆ ಕುಸಿದ ರಾಮನಗರ

ಸಾಮಾಜಿಕ ಲೆಕ್ಕಪರಿಶೋಧನಾ ವರದಿಗೆ ತಲ್ಲಣ; ಕ್ರಮದ ಭರವಸೆ

ಆರ್.ಜಿತೇಂದ್ರ
Published 13 ಡಿಸೆಂಬರ್ 2018, 19:45 IST
Last Updated 13 ಡಿಸೆಂಬರ್ 2018, 19:45 IST

ರಾಮನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಅಗ್ರ ಸ್ಥಾನದಲ್ಲಿದ್ದ ರಾಮನಗರ ಜಿಲ್ಲೆಯು ಇದೀಗ 27ನೇ ಸ್ಥಾನಕ್ಕೆ ಕುಸಿದಿದೆ. ಆದರೆ ಇದೇ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನ ಪಡೆದಿದೆ!

ರಾಜ್ಯದಲ್ಲಿ ನಡೆದಿರುವ ನರೇಗಾ ಕಾಮಗಾರಿಗಳ ಕುರಿತು ಸಾಮಾಜಿಕ ಲೆಕ್ಕಪರಿಶೋಧನಾ ನಿರ್ದೇಶನಾಲಯವು ವರದಿ ಬಿಡುಗಡೆ ಮಾಡಿದೆ. ರಾಮನಗರ ಜಿಲ್ಲೆಯಲ್ಲಿ 17,111 ಪ್ರಕರಣಗಳಲ್ಲಿ ₹45 ಕೋಟಿ ಮೊತ್ತದ ಕಾಮಗಾರಿಗಳ ಗುಣಮಟ್ಟ ಮತ್ತು ಅನುದಾನದ ಬಗ್ಗೆ ನಿರ್ದೇಶನಾಲಯವು ಅತೃಪ್ತಿ ವ್ಯಕ್ತಪಡಿಸಿದ್ದು, ಈ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಶಂಕೆಯನ್ನು ವ್ಯಕ್ತಪಡಿಸಿದೆ. ಮಾತ್ರವಲ್ಲ, ಸೋರಿಕೆಯ ಮೊತ್ತವನ್ನು ಸಂಬಂಧಿಸಿದ ಅಧಿಕಾರಿಗಳಿಂದ ವಸೂಲಿ ಮಾಡುವಂತೆಯೂ ಆದೇಶ ನೀಡಿದೆ.

ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷದಿಂದಲೂ ನರೇಗಾ ಕಾಮಗಾರಿಗಳು ಭರದಿಂದ ಸಾಗಿದ್ದವು. ಅದರಲ್ಲಿಯೂ ಕನಕಪುರ ತಾಲ್ಲೂಕು ಈ ಯೋಜನೆ ಅನುಷ್ಠಾನದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನಕ್ಕೇರಿತ್ತು. ಅದರೊಟ್ಟಿಗೆ ಕಾಮಗಾರಿಗಳಲ್ಲಿ ವ್ಯಾಪಕವಾಗಿ ಅಕ್ರಮಗಳು ನಡೆದಿರುವ ಕುರಿತು ದೂರುಗಳೂ ದಾಖಲಾಗಿದ್ದವು. ಸಾಕಷ್ಟು ಪ್ರಕರಣಗಳಲ್ಲಿ ಸಂಬಂಧಿಸಿದ ಪಿಡಿಒ ಹಾಗೂ ಗ್ರಾಮ ಪಂಚಾಯಿತಿಗಳಿಂದ ದಂಡ ಮತ್ತು ನಷ್ಟ ವಸೂಲಿಗೆ ಜಿಲ್ಲಾ ಓಂಬುಡ್ಸ್‌ಮನ್ ಕಾರ್ಯಾಲಯವು ಆದೇಶ ನೀಡಿತ್ತು.

ADVERTISEMENT

2019ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ನರೇಗಾ ಅಡಿ ನಡೆದಿರುವ ಕಾಮಗಾರಿಗಳನ್ನು ಸಾಮಾಜಿಕ ಲೆಕ್ಕಪರಿಶೋಧನೆ ಅಧಿಕಾರಿಗಳು ತನಿಖೆ ನಡೆಸಿದ್ದರು. ಆಯ್ದ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿದ್ದ ಅಧಿಕಾರಿಗಳು ಅಲ್ಲಿ ಮಾಹಿತಿ ಕಲೆ ಹಾಕಿದ್ದರು. ಹೀಗೆ ಮಾಡಲಾದ ಅಧ್ಯಯನದ ಮೇಲೆ ಸಮಿತಿಯು ಸರ್ಕಾರಕ್ಕೆ ವರದಿ ನೀಡಿದೆ.

ತೆವಳುತ್ತಾ ಸಾಗಿರುವ ಯೋಜನೆ: ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯು ನರೇಗಾ ಕಾಮಗಾರಿಗಳ ಮೇಲೆ ಕಣ್ಣಿಡಲು ‘ಸೆಕ್ಯೂರ್‌’ ತಂತ್ರಾಂಶ ಬಳಕೆಗೆ ತಂದ ಬಳಿಕ ಜಿಲ್ಲೆಯಲ್ಲಿ ನರೇಗಾ ಕಾಮಗಾರಿಯು ಕುಂಟುತ್ತಾ ಸಾಗಿದೆ. ಜಿಲ್ಲೆಯಲ್ಲಿ ಈಗಲೂ ನರೇಗಾ ಕಾಮಗಾರಿಗಳಲ್ಲಿ ಕನಕಪುರ ತಾಲ್ಲೂಕು ಮುಂದೆ ಇದೆ. ಆದರೆ ಯಾವ ತಾಲ್ಲೂಕು ಸಹ ವಾರ್ಷಿಕ ಗುರಿಯ ಅರ್ಧದಷ್ಟನ್ನೂ ತಲುಪಲು ಸಾಧ್ಯವಾಗಿಲ್ಲ.

ಯಾವ್ಯಾವ ಇಲಾಖೆ ಎಷ್ಟೆಷ್ಟು?: ಪಂಚಾಯತ್ ರಾಜ್‌ ಇಲಾಖೆಯು 2018ರ ಏಪ್ರಿಲ್‌ನಿಂದ ಡಿ.6ವರೆಗೆ ಒಟ್ಟು 64,515 ಮಾನವ ದಿನಗಳ ಕಾಮಗಾರಿ ನಡೆಸಿದೆ. 124 ಕಾಮಗಾರಿಗಳನ್ನು ಆರಂಭಿಸಿದ್ದು, ಕೂಲಿ ಮತ್ತು ಸಾಮಗ್ರಿ ವೆಚ್ಚ ಸೇರಿ ₹1.48 ಕೋಟಿ ವ್ಯಯಿಸಿದೆ. ಆದಾಗ್ಯೂ ವಾರ್ಷಿಕ ಗುರಿಯ ಶೇ 32.26ರಷ್ಟು ಸಾಧನೆ ಮಾತ್ರ ಸಾಧ್ಯವಾಗಿದೆ.

ಸಾಮಾಜಿಕ ಅರಣ್ಯ ಇಲಾಖೆಯು 1934 ಕಾಮಗಾರಿಗಳನ್ನು ಆರಂಭಿಸಿದ್ದು, 88.120 ಮಾನವ ದಿನಗಳ ಕಾಮಗಾರಿ ಸೃಜಿಸಿದೆ. ಒಟ್ಟು ₹3.60 ಕೋಟಿ ವ್ಯಯಿಸಿ ಶೇ 72.23 ರಷ್ಟು ಗುರಿ ಸಾಧನೆ ಮಾಡಿದೆ.

ಕೃಷಿ ಇಲಾಖೆಯ ನರೇಗಾ ಅನುಷ್ಠಾನದಲ್ಲಿ ತೀರ ಹಿಂದೆ ಬಿದ್ದಿದೆ. ಇಲಾಖೆಯು ಈವರೆಗೆ 728 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 21,483 ಮಾನವ ದಿನಗಳನ್ನು ಸೃಜಿಸಿದೆ. ₹1 ಕೋಟಿ ವ್ಯಯಿಸಿದ್ದು, ಶೇ 20.86 ಸಾಧನೆಯಷ್ಟೇ ಮಾಡಿದೆ.

ರೇಷ್ಮೆ ಇಲಾಖೆಯು ಕಾಮಗಾರಿ ಅನುಷ್ಠಾನದಲ್ಲಿ ಉಳಿದ ಇಲಾಖೆಗಳಿಗಿಂತ ಮುಂದೆ ಇದೆ. ಇಲ್ಲಿ 4324 ಕಾಮಗಾರಿಗಳು ಆರಂಭಗೊಂಡು, 2,82,369 ಮಾನವ ದಿನಗಳಷ್ಟು ಕೆಲಸ ನಡೆದಿದೆ. ₹6.79 ಕೋಟಿ ವ್ಯಯಿಸುವ ಮೂಲಕ ಶೇ 78.85 ಗುರಿ ಸಾಧನೆ ಮಾಡಿದೆ.

ತೋಟಗಾರಿಕೆ ಇಲಾಖೆಯು ಪ್ರಸಕ್ತ ಸಾಲಿನಲ್ಲಿ 2906 ಕಾಮಗಾರಿಗಳನ್ನು ಆರಂಭಿಸಿ 1,36,969 ಮಾನವ ದಿನಗಳಷ್ಟು ಕೆಲಸ ಮಾಡಿದೆ. ₹3.28 ಕೋಟಿ ವ್ಯಯಿಸಿ ಶೇ 34.7 ರಷ್ಟು ಗುರಿ ಸಾಧನೆ ಮಾಡಿದೆ.

ತಪ್ಪಿದ್ದಲ್ಲಿ ನಷ್ಟ ವಸೂಲಿ: ಸಿಇಒ
ವರದಿ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ರಾಮನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಲ್ಲೈ ಮುಹಿಲನ್‌, ವರದಿ ಆಧರಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

‘ಅಧಿಕಾರಿಗಳು ಗ್ರಾಮ ಪಂಚಾಯಿತಿಗಳಿಗೆ ನೇರವಾಗಿ ತೆರಳಿ ಆಡಿಟ್ ಮಾಡಿ ಸರ್ಕಾರಕ್ಕೆ ವರದಿ ನೀಡಿದ್ದಾರೆ.
ಕೆಲಸ ಮಾಡದೆಯೇ ಹಣ ಡ್ರಾ ಮಾಡಿಕೊಂಡ ಪ್ರಕರಣಗಳು ನಮ್ಮಲ್ಲಿ ವರದಿ ಆಗಿಲ್ಲ. ಆದರೆ ಬೇರೆ ಬೇರೆ ಆಯಾಮಗಳಲ್ಲಿ ಆಕ್ಷೇಪಗಳನ್ನು ಸಮಿತಿಯು ಸಲ್ಲಿಸಿದ್ದು, ಅದರ ವರದಿಗಳನ್ನು ಇನ್ನಷ್ಟೇ ನೋಡಬೇಕಿದೆ. ಕೆಲವು ಪ್ರಕರಣಗಳಲ್ಲಿ ನಮ್ಮ ಎಂಜಿನಿಯರ್‌ಗಳು ಮೇಲ್ಮನವಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ಕಂಡುಬಂದವರ ವಿರುದ್ಧ ಕ್ರಮಕ್ಕೆ ಸರ್ಕಾರವು ಸೂಚಿಸುತ್ತದೆ. ಅಂತಹವರಿಂದ ನಷ್ಟ ವಸೂಲಿ ಮಾಡುತ್ತೇವೆ’ ಎಂದರು.

ಈ ಲೋಪಗಳನ್ನು ಸರಿಪಡಿಸಲೆಂದೇ ‘ಸೆಕ್ಯೂರ್‌’ ತಂತ್ರಜ್ಞಾನ ಬಂದಿದೆ. ಎಲ್ಲಿಯೂ ಅಕ್ರಮಕ್ಕೆ ಆಸ್ಪದ ಕೊಡದಂತೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಹೇಳಿದರು.

ನರೇಗಾ ಯೋಜನೆಯ ವಿವರ
2017–18

57.83 ಲಕ್ಷ –ಜಿಲ್ಲೆಯಲ್ಲಿ ಮಾನವ ದಿನಗಳ ಸೃಜನೆ
₹ 228 ಕೋಟಿ–ಯೋಜನೆಯ ವೆಚ್ಚ
11,600 –ದನದ ಕೊಟ್ಟಿಗೆಗಳ ನಿರ್ಮಾಣ
3174–ಕೃಷಿ ಹೊಂಡಗಳ ನಿರ್ಮಾಣ
4940–ಚೆಕ್‌ ಡ್ಯಾಮ್‌ಗಳ ನಿರ್ಮಾಣ

**

2018–19 (ಡಿಸೆಂಬರ್‌ 6ವರೆಗೆ)

55 ಲಕ್ಷ–ಮಾನವ ದಿನಗಳ ಸೃಜನೆಯ ಗುರಿ
20.46 ಲಕ್ಷ–ಸೃಜಿಸಲಾದ ಮಾನವ ದಿನಗಳು
₨98.18 ಕೋಟಿ–ಮೊತ್ತದ ಹಣ ವಿನಿಯೋಗ
ಶೇ 37.20–ವಾರ್ಷಿಕ ಗುರಿ ಸಾಧನೆಯ ಪ್ರಮಾಣ

**

ತಾಲ್ಲೂಕುವಾರು ನರೇಗಾ ಗುರಿ ಮತ್ತು ಸಾಧನೆ (ಡಿ.6ವರೆಗೆ)

ತಾಲ್ಲೂಕು ಮಾನವ ದಿನ ಸೃಜನೆ ಗುರಿ ಸಾಧನೆ ವೆಚ್ಚ ವಾರ್ಷಿಕ ಗುರಿ ಸಾಧನೆ
ಚನ್ನಪಟ್ಟಣ 14 ಲಕ್ಷ 4,33,188 ₹13.70 ಕೋಟಿ ಶೇ 30.94
ಕನಕಪುರ 20 ಲಕ್ಷ 9,33,044 ₹58.32 ಕೋಟಿ ಶೇ 46.65
ಮಾಗಡಿ 14 ಲಕ್ಷ 4,22,480 ₹ 17.06 ಕೋಟಿ ಶೇ 30.18
ರಾಮನಗರ 7 ಲಕ್ಷ 2,57,499 ₹9.09 ಕೋಟಿ ಶೇ 37.20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.