ರಾಮನಗರ: ಗ್ರಾಮೀಣ ಭಾಗದ ಜನರಿಗೆ ಆಸರೆಯಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೌಶಲ ರಹಿತ ಕೂಲಿ ಕೆಲಸ ಮಾಡುವ ಕೂಲಿಕಾರರ ದಿನಗೂಲಿ ಮೊತ್ತವನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ₹21 ಏರಿಕೆ ಮಾಡಿದೆ.
ಹಿಂದೆ 2024–25ನೇ ಸಾಲಿನಲ್ಲಿದ್ದ ₹349 ಕೂಲಿ ಮೊತ್ತವನ್ನು ಪರಿಷ್ಕರಿಸಿರುವ ಸಚಿವಾಲಯವು, 2025–26ನೇ ಸಾಲಿನಲ್ಲಿ ₹370ಕ್ಕೆ ಹೆಚ್ಚಳ ಮಾಡಿದೆ. ಪರಿಷ್ಕೃತ ದಿನಗೂಲಿ ಏಪ್ರಿಲ್ 1ರಿಂದಲೇ ಜಾರಿಗೆ ಬಂದಿದೆ. ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೂ ಒಂದು ವರ್ಷದಲ್ಲಿ 100 ದಿನ ಕೌಶಲ ರಹಿತ ಕೂಲಿ ಕೆಲಸ ನೀಡಲಾಗುತ್ತದೆ.
‘ನರೇಗಾದಡಿ ಕೂಲಿಕಾರನೊಬ್ಬ ವರ್ಷದಲ್ಲಿ 100 ದಿನ ಕೆಲಸ ಮಾಡಿದರೆ ₹37 ಸಾವಿರ ಕೂಲಿ ಹಣ ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಗಂಡು ಮತ್ತು ಹೆಣ್ಣೆಂಬ ಬೇಧವಿಲ್ಲದೆ ಇಬ್ಬರಿಗೂ ಸಮಾನ ಕೂಲಿ ಪಾವತಿಸಲಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ‘ಪ್ರಜಾವಾಣಿ’ ತಿಳಿಸಿದರು.
‘ಜಿಲ್ಲೆಯಲ್ಲಿ 1,99,106 ನರೇಗಾ ಜಾಬ್ ಕಾರ್ಡ್‌ಗಳಿವೆ. ಈ ಪೈಕಿ ಕನಕಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು 77,939 ಕಾರ್ಡ್‌ಗಳಿದ್ದರೆ, ರಾಮನಗರ ತಾಲ್ಲೂಕಿನಲ್ಲಿ ಅತಿ ಕಡಿಮೆ 34,495 ಕಾರ್ಡ್‌ಗಳಿವೆ. ಉಳಿದಂತೆ ಮಾಗಡಿ ತಾಲ್ಲೂಕಿನಲ್ಲಿ 43,989 ಹಾಗೂ ಚನ್ನಪಟ್ಟಣ ತಾಲ್ಲೂಕಿನಲ್ಲಿ 42,683 ಜಾಬ್ ಕಾರ್ಡ್‌ಗಳಿವೆ’ ಎಂದು ಜಿಲ್ಲಾ ಪಂಚಾಯಿತಿಯ ನರೇಗಾ ವಿಭಾಗದ ಯೋಜನಾ ನಿರ್ದೇಶಕ ಮಂಜುನಾಥ ಸ್ವಾಮಿ ಹೇಳಿದರು.
‘ನರೇಗಾ ಯೋಜನೆಯ ಪರಿಣಾಮಕಾರಿಯಾಗಿ ಅನುಷ್ಠಾನ, ಮಾನವ ದಿನಗಳ ಸೃಜನೆ, ಕಾಮಗಾರಿ ಅನುಷ್ಠಾನ ಮತ್ತು ಮುಕ್ತಾಯಗೊಳಿಸುವಿಕೆ, ಉತ್ತಮ ಆಡಳಿತ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವಿಕೆ, ಸಾಮಾಜಿಕ ಪರಿಶೋಧನೆ ಆಕ್ಷೇಪಣೆ ಮೇಲಿನ ವಸೂಲಾತಿ ಸೇರಿದಂತೆ ವಿವಿಧ ವಿನೂತನ ಕಾರ್ಯಕ್ರಮಗಳಿಗಾಗಿ ರಾಮನಗರ ಜಿಲ್ಲಾ ಪಂಚಾಯಿತಿಯು ‘ಅತ್ಯುತ್ತಮ ಒಗ್ಗೂಡಿಸುವಿಕೆ’ ಪುರಸ್ಕಾರಕ್ಕೆ ಪಾತ್ರವಾಗಿತ್ತು’ ಎಂದು ತಿಳಿಸಿದರು.
‘ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಫೆಬ್ರುರಿಯಲ್ಲಿ ಜರುಗಿದ್ದ ಮಹಾತ್ಮ ಗಾಂಧಿ ನರೇಗಾ ಹಬ್ಬದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ಅವರಿಗೆ ‘ಅತ್ಯುತ್ತಮ ಒಗ್ಗೂಡಿಸುವಿಕೆ’ ಜಿಲ್ಲಾ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದ್ದರು’ ಎಂದು ನೆನೆದರು.
ಪ್ರತಿ ವರ್ಷದಂತೆ ಈ ವರ್ಷವೂ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ನರೇಗಾದಡಿ ಕೌಶಲ ರಹಿತ ಕೂಲಿ ಕೆಲಸ ಮಾಡುವ ಕೂಲಿಕಾರರ ದಿನಗೂಲಿಯನ್ನು ಹೆಚ್ಚಳ ಮಾಡಿದೆ. ಇದರಿಂದಾಗಿ ಕೂಲಿಕಾರರಿಗೆ ಹೆಚ್ಚಿನ ಅನುಕೂಲವಾಗಲಿದೆ– ಅನ್ಮೋಲ್ ಜೈನ್, ಸಿಇಒ ಜಿಲ್ಲಾ ಪಂಚಾಯಿತಿ ರಾಮನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.