
ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಅವರು ಜಂತುಹುಳು ನಿವಾರಣಾ ದಿನದ ಪೋಸ್ಟರ್ ಬಿಡುಗಡೆ ಮಾಡಿದರು.
ರಾಮನಗರ: ‘ಜಂತುಹುಳು ರಹಿತ ಮಾತ್ರೆಗಳಿಂದ ಅಪೌಷ್ಠಿಕತೆ ಮತ್ತು ರಕ್ತಹೀನತೆ ತಡೆಗಟ್ಟಬಹುದು. ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವ ಮಾತ್ರೆಗಳನ್ನು ಜಿಲ್ಲೆಯಾದ್ಯಂತ ತಪ್ಪದೆ 1 ವರ್ಷದಿಂದ 19 ವರ್ಷದೊಳಗಿನ ಮಕ್ಕಳಿಗೆ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿಗಳ ಕಚೇರಿ, ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ, ವಿವಿಧ ಅಭಿವೃದ್ಧಿ ಇಲಾಖೆಗಳು ಹಾಗೂ ಸ್ವಯಂ ಸೇವ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
‘ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳಲ್ಲಿ ಶಿಕ್ಷಕರ ನೇರ ನಿಗಾವಣೆಯಲ್ಲಿ ಮಾತ್ರೆಗಳನ್ನು ನೀಡುವ ಮೂಲಕ, ಮಕ್ಕಳನ್ನು ಜಂತು ಹುಳು ರಹಿತ ಆರೋಗ್ಯವಂತ ಮಕ್ಕಳನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕು. ಈ ವಿಷಯದಲ್ಲಿ ಯಾರೂ ನಿರ್ಲಕ್ಷ್ಯ ತೋರಬಾರದು’ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್ ಬಿ.ಎಸ್ ಮಾತನಾಡಿ, ‘ಫೆ. 10ನೇ ದಿನವನ್ನು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನವನ್ನಾಗಿ ಜಿಲ್ಲೆಯಾದ್ಯಂತ ಆಚರಿಸಲಾಗುತ್ತಿದೆ. ಅದರ ಪ್ರಯುಕ್ತ 19 ವರ್ಷದೊಳಗಿನ ಮಕ್ಕಳಿಗೆ ಜಂತುಹುಳು ನಾಶಕ ಆಲ್‌ಬೆಂಡಜೋಲ್ ಮಾತ್ರೆಗಳನ್ನು ವಿತರಿಸಲಾಗುತ್ತಿದೆ’ ಎಂದರು.
‘ಜಂತುಹುಳು ಭಾದೆಯಿಂದ ಅಪೌಷ್ಟಿಕತೆ, ರಕ್ತಹೀನತೆ, ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಕುಂಠಿತವಾಗುವುದು, ಅನಾರೋಗ್ಯದಿಂದ ಮಕ್ಕಳು ಬಳಲುತ್ತಾರೆ. ಅದನ್ನು ನಿವಾರಣೆ ಮಾಡಲು ಇಲಾಖೆಯು ಈ ಕಾರ್ಯಕ್ರಮದ ಮೂಲಕ ಕ್ರಮ ಕೈಗೊಂಡಿದೆ’ ಎಂದು ಹೇಳಿದರು.
ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ರಾಜು ವಿ. ಮಾತನಾಡಿ, ‘ಜಿಲ್ಲೆಯಲ್ಲಿ 19 ವರ್ಷದೊಳಗಿನ 2,45,512 ಮಕ್ಕಳಿದ್ದಾರೆ. ಅವರಿಗೆ 1,585 ಅಂಗನವಾಡಿ ಕೇಂದ್ರಗಳು ಹಾಗೂ 1,735 ಶಾಲಾ -ಕಾಲೇಜುಗಳಲ್ಲಿ ಜಂತುಹುಳು ನಿವಾರಣಾ ಮಾತ್ರೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.
‘ಒಂದರಿಂದ 2 ವರ್ಷದ ಮಕ್ಕಳಿಗೆ ಅರ್ಧ ಆಲ್‌ಬೆಂಡಜೋಲ್ (200 ಮಿ.ಗ್ರಾಂ) ಮಾತ್ರೆ, 2ರಿಂದ 19 ವರ್ಷದೊಳಗಿನವರಿಗೆ ಆಲ್‌ಬೆಂಡಜೋಲ್ (400 ಮಿ.ಗ್ರಾಂ) ಮಾತ್ರೆ ನೀಡಲಾಗುವುದು. ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಂದ ಮನೆಗಳಿಗೆ ಭೇಟಿ ನೀಡಿ ಮಾತ್ರೆ ನೀಡಲಾಗುವುದು’ ಎಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಜಂತುಹುಳು ನಿವಾರಣ ದಿನದ ಪೋಸ್ಟರ್ ಅನ್ನು ಜಿ.ಪಂ. ಸಿಇಒ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಡಿ.ಎಲ್.ಒ ಡಾ. ಕುಮಾರ್, ಡಿ.ಟಿ.ಒ ಡಾ. ಶಶಿಕಿರಣ್ ಎಂ.ಟಿ, ಡಿ.ಎಸ್.ಒ ಡಾ. ಕಿರಣ್‌ಶಂಕರ್ ಎಸ್., ಡಿ.ಎಂ.ಒ ಡಾ. ಪದ್ಮಾವತಿ ಎಂ, ತಾಲ್ಲೂಕು ಆರೋಗ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು, ಶಾಲಾ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.