
ಹಾರೋಹಳ್ಳಿ: 2025-26ನೇ ಸಾಲಿನಲ್ಲಿ ಭಾರತಿ ಏರ್‌ಟೆಲ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ನ್ಯಾಷನಲ್ ಟಿಎಲ್ಎಂ ಲೀಗ್ 2025ರ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕಲ್ಲನಕುಪ್ಪೆ ಪ್ರೌಢಶಾಲೆ ಮಾದರಿ ವಿಜ್ಞಾನ ಶಿಕ್ಷಕ ಶಿವಶಂಕರಾಚಾರಿ.ಕೆ ಭಾಗವಹಿಸಿ ಮನ್ನಣೆಗೆ ಪಾತ್ರರಾಗಿದ್ದಾರೆ. ಅವರು ಮಂಡಿಸಿದ ಕೇಂದ್ರ ತ್ಯಾಗಿ ಬಲ ಹಾಗೂ ಅದರ ಅನ್ವಯಗಳ ಕುರಿತ ಕಡಿಮೆ ವೆಚ್ಚದ ಕಲಿಕೋಪಕರಣ ಪ್ರಸ್ತುತಿ ಕುರಿತಾದ ಆನ್‌ಲೈನ್ ಮೋಡ್ ಪ್ರದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.
ದೇಶದ ವಿವಿಧ ರಾಜ್ಯಗಳ ನೂರಾರು ಶಿಕ್ಷಕರು ಈ ಪ್ರದರ್ಶನದಲ್ಲಿ ಭಾಗವಹಿಸಿ ತಮ್ಮ ಮಾದರಿಗಳನ್ನು ಪ್ರದರ್ಶಿಸಿದರು. ಶಿವಶಂಕರ ಚಾರಿ ಅವರ ಮಾದರಿಯು ಉತ್ತಮ ಹಾಗೂ ಹೆಚ್ಚು ಉಪಯುಕ್ತ ಮಾದರಿಯಾಗಿದ್ದು ರಾಷ್ಟ್ರ ಮಟ್ಟದಲ್ಲಿ ಈ ಅಂಶ ತೀರ್ಪುಗಾರರ ಗಮನ ಸೆಳೆದು ಪ್ರಥಮ ಸ್ಥಾನ ಪಡೆದು ಪ್ರಶಸ್ತಿಗೆ ಆಯ್ಕೆಯಾಗಿತ್ತು.
ಜನವರಿ 16ರಂದು ದೆಹಲಿ ಭಾರತೀಯ ಸಂವಿಧಾನ ಕ್ಲಬ್‌ನಲ್ಲಿ ಭಾರತಿ ಏರ್‌ಟೆಲ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೇಂದ್ರ ನೀತಿ ಆಯೋಗದ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ವಿಭಾಗದ ವಿಶೇಷ ಅಧಿಕಾರಿಗಳಾದ ಲೆಫ್ಟಿನೆಂಟ್ ಕರ್ನಲ್ ಜಿತೇಂದ್ರ ವರ್ಮ ಹಾಗೂ ಸಿಬಿಎಸ್ಇ ಶಾಲೆಗಳ ತರಬೇತಿ ವಿಭಾಗದ ನಿರ್ದೇಶಕ ಮನೋಜ್ ಕುಮಾರ್ ಶ್ರೀವಾಸ್ತವ ಅವರು ಶಿಕ್ಷಕರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಿ ಗೌರವಿಸಿದರು.
ಶಿಕ್ಷಕನ ಸಾಧನೆಯನ್ನು ಶಾಲೆ ಮುಖ್ಯ ಶಿಕ್ಷಕಿ ಸೌಭಾಗ್ಯ ಜಿ.ಎಸ್, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹದೇವ್ ಡಿ.ಎಂ, ಹಾಗೂ ಸಿಂಹ ಎಸ್ಟೇಟ್‌ನ ಶ್ರೀನರಸಿಂಹ ಮೂರ್ತಿ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.