
ಚನ್ನಪಟ್ಟಣ: ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಭಾನುವಾರ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ತಹಶೀಲ್ದಾರ್ ಬಿ.ಎನ್. ಗಿರೀಶ್, ‘ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು ಹಾಗೂ ಕರ್ತವ್ಯ. ಸಂವಿಧಾನ ನೀಡಿರುವ ಈ ಪವಿತ್ರ ಹಕ್ಕನ್ನು ಯಾವುದೇ ದುರುಪಯೋಗ ಮಾಡಿಕೊಳ್ಳಬಾರದು. ಆಸೆ ಆಮಿಷಗಳಿಗೆ ಒಳಗಾಗದೇ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸಬೇಕು‘ ಎಂದರು.
‘2011ರಿಂದ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಶೇ 100ರಷ್ಟು ಮತದಾನ ಸಾಧಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಮತದಾನ ಮಾಡಿದಾಗ ಮಾತ್ರ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗುತ್ತದೆ. ಮತದಾನದಿಂದ ದೂರ ಉಳಿದರೆ ಅದು ದೇಶದ ಪ್ರಗತಿಗೆ ದ್ರೋಹ ಮಾಡಿದಂತಾಗುತ್ತದೆ. ಹಾಗಾಗಿ, ಯಾರೂ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯಬಾರದು’ ಎಂದರು.
ನೂತನವಾಗಿ ನೋಂದಣಿಯಾದ ಯುವ ಮತದಾರರಾದ ಮೋನಿಕಾ, ಲವೀಶ್ ಗೌಡ, ಶಬಾದ್ ಖಾನ್, ಮೋಹಿತ್ ಕುಮಾರ್ ಇತರರಿಗೆ ತಹಶೀಲ್ದಾರ್ ಗಿರೀಶ್ ಅವರು ಮತದಾರರ ಗುರುತಿನ ಚೀಟಿ ವಿತರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಾಮಲಿಂಗಯ್ಯ, ತಾಲ್ಲೂಕು ಪಂಚಾಯಿತಿ ಇಒ ಸಂದೀಪ್, ಭೂ ದಾಖಲೆಗಳ ತಾಲೂಕು ಸಹಾಯಕ ನಿರ್ದೇಶಕ ಪ್ರಖ್ಯಾತ್, ಲೋಕೋಪಯೋಗಿ ಇಲಾಖೆಯ ಎಇಇ ಮಲ್ಲಿಕಾರ್ಜುನ್, ಪ್ರಧಾನಮಂತ್ರಿ ಪೋಷಣ ಅಭಿಯಾನ ಸಹಾಯಕ ನಿರ್ದೇಶಕ ಸಿದ್ದರಾಜು, ಸಮಾಜ ಕಲ್ಯಾಣ ಇಲಾಖೆಯ ರಮೇಶ್, ಮುಖ್ಯಶಿಕ್ಷಕ ಯೋಗೇಶ್, ಉಪ ತಹಶೀಲ್ದಾರ್ ಹರೀಶ್ ಕುಮಾರ್, ಶಿರಸ್ತೆದಾರ್ ಸುನಿಲ್, ಕಸಬಾ ಕಂದಾಯ ನಿರೀಕ್ಷಕ ಶ್ರೀಧರ್, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.