ADVERTISEMENT

ರಾಮನಗರ| ಸಂವಿಧಾನ ಆಧಾರಿತ ರಾಜಕಾರಣ ಅಗತ್ಯ: ವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ

ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 17 ಜುಲೈ 2023, 15:44 IST
Last Updated 17 ಜುಲೈ 2023, 15:44 IST
ಕಗ್ಗಲೀಪುರದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘದ ಕಗ್ಗಲೀಪುರ ವೃತ್ತ ಶಾಖೆಯನ್ನು ಗಣ್ಯರು ಉದ್ಘಾಟಿಸಿದರು. ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ರೈತ ಸಂಘದ ಹಿರಿಯ ಮುಖಂಡ ಸಿ. ಪುಟ್ಟಸ್ವಾಮಿ, ವೆಂಕಟೇಶ್ ಎಚ್.ಎಂ, ರಮೇಶ್, ಎಚ್.ಎನ್. ರುದ್ರಪ್ಪ, ಎಂ.ಸಿ. ಸ್ವಾಮಿ, ನದೀಮ್ ಪಾಷಾ ಇದ್ದಾರೆ 
ಕಗ್ಗಲೀಪುರದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘದ ಕಗ್ಗಲೀಪುರ ವೃತ್ತ ಶಾಖೆಯನ್ನು ಗಣ್ಯರು ಉದ್ಘಾಟಿಸಿದರು. ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ರೈತ ಸಂಘದ ಹಿರಿಯ ಮುಖಂಡ ಸಿ. ಪುಟ್ಟಸ್ವಾಮಿ, ವೆಂಕಟೇಶ್ ಎಚ್.ಎಂ, ರಮೇಶ್, ಎಚ್.ಎನ್. ರುದ್ರಪ್ಪ, ಎಂ.ಸಿ. ಸ್ವಾಮಿ, ನದೀಮ್ ಪಾಷಾ ಇದ್ದಾರೆ    

ರಾಮನಗರ: ‘ಜನಪ್ರತಿನಿಧಿಗಳಾದವರು ತಮ್ಮ ಜಾತಿ, ಧರ್ಮ ಹಾಗೂ ಭಾಷೆಗಳಿಗೆ ಸೀಮಿತರಾಗಿ ಆಮಿಷಗಳನ್ನು ಹುಟ್ಟು ಹಾಕದೆ, ಸಂವಿಧಾನ ಆಧಾರಿತ ರಾಜಕಾರಣ ಮಾಡಬೇಕು. ಸಂವಿಧಾನದ ಮೌಲ್ಯಗಳನ್ನು ಉಳಿಸುವ ಮೊದಲನೇ ದರ್ಜೆಯ ರಾಜಕಾರಣ ಇಂದಿನ ಅಗತ್ಯವಾಗಿದೆ’ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ಕಗ್ಗಲೀಪುರದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ರೈತ ಸಂಘದ ಕಗ್ಗಲೀಪುರ ವೃತ್ತ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಹುತೇಕ ರೋಗಗಳಿಗೆ ಮದ್ದಿದೆ. ಆದರೆ, ದುರಾಸೆಗಿಲ್ಲ. ತೃಪ್ತಿ ಎಂಬುದು ಮೌಲ್ಯ. ರಾಜಕಾರಣಿಗಳು ತೃಪ್ತಿ ಅನುಭವಿಸದೆ ಹೋದರೆ ಅವರ ಭವಿಷ್ಯಗಳೇ ನಾಶವಾಗುತ್ತವೆ’ ಎಂದು ಹೇಳಿದರು.

‘ಕರ್ನಾಟಕದ ರೈತ ಚಳುವಳಿಗೆ ಬಹುದೊಡ್ಡ ಇತಿಹಾಸವಿದೆ. ಅಂತಹ ಚಳುವಳಿಯನ್ನು ಉಳಿಸಿ, ಬೆಳೆಸಿ ಅಪ್ಪಿಕೊಳ್ಳುವುದು ರೈತ ಸಮುದಾಯದ ಕರ್ತವ್ಯ. ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಎಲ್ಲಾ ಹಳ್ಳಿಗಳಲ್ಲೂ ಜರುಗಬೇಕು’ ಎಂದು ಕರೆ ನೀಡಿದರು.

ADVERTISEMENT

ರೈತ ಸಂಘದ ಹಿರಿಯ ಮುಖಂಡ ಸಿ. ಪುಟ್ಟಸ್ವಾಮಿ ಮಾತನಾಡಿ, ‘80ರ ದಶಕದಲ್ಲಿ ಆರಂಭಗೊಂಡ ನರಗುಂದ ರೈತ ಬಂಡಾಯವು ರೈತ ಸಂಘದ ಉದಯಕ್ಕೆ ಕಾರಣವಾಯಿತು. ಲೇವಿ ನೀತಿ, ರೈತರ ಮನೆ ಜಪ್ತಿ ತಡೆ ಚಳವಳಿ, ಅಸಮರ್ಪಕ ವಿದ್ಯುತ್ ಸರಬರಾಜು, ಸರಳ ಮದುವೆ, ರೈತ ವಿರೋಧಿ ಕೃಷಿ ನೀತಿ ಸೇರಿದಂತೆ ವಿವಿಧ ಚಳವಳಿಗಳಿಂದಾಗಿ ಸಂಘವು ವಿಸ್ತರಣೆಯಾಗುತ್ತಾ ಬಂತು’ ಎಂದರು.

‘ಚಳವಳಿಯ ಪರಿಣಾಮದಿಂದ ರೈತರಲ್ಲಿ ಆತ್ಮಾಭಿಮಾನ ಮೂಡಿತು. ರೈತ ಈ ದೇಶದ ಮೊದಲನೇ ದರ್ಜೆ ನಾಗರಿಕ ಎಂಬುದನ್ನು ಮತ್ತು ಕೃಷಿ ಕ್ಷೇತ್ರ ಶೇ 50ರಷ್ಟು ಉದ್ಯೋಗವನ್ನು ನೀಡುತ್ತಿದೆ, ಭಾರತ ಬದುಕಿರುವುದೇ ಹಳ್ಳಿಗಳ ಉಸಿರಾಟದಿಂದ ಎಂಬ ಸಂದೇಶ ದೇಶಕ್ಕೆ ತಲುಪಿತು. ರೈತರ ಹಿತಾಸಕ್ತಿ ಕಡೆಗಣಿಸಿದರೆ ದೇಶಕ್ಕೆ ಉಳಿಗಾಲವಿಲ್ಲ ಎಂಬುದು ಗೊತ್ತಾಯಿತು’ ಎಂದು ಹೇಳಿದರು.

ಸಾಮಾಜಿಕ ಹೋರಾಟಗಾರ ವೆಂಕಟೇಶ್ ಎಚ್.ಎಂ. ಮಾತನಾಡಿ, ‘ಸಂಘವು ಗ್ರಾಮ ಮಟ್ಟದಲ್ಲಿ ಅಧ್ಯಯನ ಶಿಬಿರಗಳನ್ನ ಏರ್ಪಡಿಸಬೇಕು. ರೈತರ ಹಕ್ಕುಗಳು ಮತ್ತು ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಸುಮಾರು 28 ಹಳ್ಳಿಗಳ 400ಕ್ಕೂ ಹೆಚ್ಚು ರೈತರು ಸಂಘದ ಸದಸ್ಯತ್ವ ಪಡೆದರು. ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸಾಮಾಜಿಕ ಕಾರ್ಯಕರ್ತ ರಮೇಶ್, ನಿವೃತ್ತ ಅಧಿಕಾರಿ ಎಚ್.ಎನ್. ರುದ್ರಪ್ಪ, ಕೃಷಿ ಉತ್ಪನ್ನ ಮಾರಾಟ ಮಹಾಮಂಡಳಿಯ ನಿವೃತ್ತ ಅಧಿಕಾರಿ ಎಂ.ಸಿ. ಸ್ವಾಮಿ, ನದೀಮ್ ಪಾಷಾ, ಪ್ರಶಾಂತ್ ಹೊಸದುರ್ಗ ಇದ್ದರು.

ರಾಜಕಾರಣಿಗಳು ತೃಪ್ತಿಪಡದಿದ್ದರೆ ಭವಿಷ್ಯ ನಾಶ ರೈತ ಚಳವಳಿ ಉಳಿಸಿ–ಬೆಳೆಸುವುದು ಎಲ್ಲರ ಕರ್ತವ್ಯ ಅನ್ನದಾತನಿಗೆ ಆತ್ಮಾಭಿಮಾನ ಮೂಡಿಸಿದ ರೈತ ಸಂಘ

‘ಕೆಲವರಿಂದ ಕೆಲವರಿಗೋಸ್ಕರ ಪ್ರಜಾಪ್ರಭುತ್ವ’ ‘ಜನರಿಂದ ಜನರಿಗಾಗಿ ಜನರಿಗೋಸ್ಕರ ಇರಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆ ಇಂದು ಪೂರ್ಣಪ್ರಮಾಣದಲ್ಲಿ ಹದಗೆಟ್ಟಿದೆ. ಕೆಲವರಿಂದ ಕೆಲವರಿಗಾಗಿ ಕೆಲವರಿಗೋಸ್ಕರವೇ ಪ್ರಜಾಪ್ರಭುತ್ವ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ವೈಯಕ್ತಿಕ ಹಿತಾಸಕ್ತಿಗಳೇ ಇಂದಿನ ಪ್ರಜಾಪ್ರಭುತ್ವದಲ್ಲಿ ಮನೆ ಮಾಡಿವೆ. ಜೈಲಿಗೆ ಹೋಗಿ ಬಂದವರಿಗೆ ಅವರ ಹಿಂಬಾಲಕರ ಪಡೆಯು ರಾಜ ಮರ್ಯಾದೆ ನೀಡಿ ಸೇಬಿನ ಹಾರ ಹಾಕಿ ಕರೆ ತರುವುದು ಸಾಮಾಜಿಕ ಮೌಲ್ಯದ ಪತನಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದು ನ್ಯಾ. ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.