ADVERTISEMENT

ಮಾಗಡಿ | ಪ್ರಾಣ ಉಳಿಸಲಿದೆಯೇ ಈ ಮೇಲ್ಸುತುವೆ?: ಸಾರ್ವಜನಿಕರಲ್ಲಿ ಹೀಗೊಂದು ಚರ್ಚೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 5:05 IST
Last Updated 19 ಜನವರಿ 2026, 5:05 IST
ಮಾಗಡಿ ತಾಲ್ಲೂಕಿನ ತಾಳೆಕೆರೆ ಹ್ಯಾಂಡ್ ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ ವತಿಯಿಂದ ಮೇಲ್ಸುತುವೆ ಕಾಮಗಾರಿ ಆರಂಭವಾಗಿರುವುದು
ಮಾಗಡಿ ತಾಲ್ಲೂಕಿನ ತಾಳೆಕೆರೆ ಹ್ಯಾಂಡ್ ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ ವತಿಯಿಂದ ಮೇಲ್ಸುತುವೆ ಕಾಮಗಾರಿ ಆರಂಭವಾಗಿರುವುದು   

ಮಾಗಡಿ: ರಾಷ್ಟ್ರೀಯ ಹೆದ್ದಾರಿ 75 (ಬೆಂಗಳೂರು-ಮಂಗಳೂರು) ತಾಳೆಕೆರೆ ಹ್ಯಾಂಡ್‍ಪೋಸ್ಟ್‌ ಬಳಿ ಹೆದ್ದಾರಿ ಪ್ರಾಧಿಕಾರದಿಂದ ಮೇಲ್ಸುತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ನಿರ್ಮಾಣದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಕಡಿಮೆಯಾಗುತ್ತವೆಯೇ? ಹೀಗೊಂದು ಚರ್ಚೆ ಸಾರ್ವಜನಿಕರಲ್ಲಿ ಆರಂಭವಾಗಿದೆ. 

ತಾಳೆಕೆರೆ ಹ್ಯಾಂಡ್‌ಪೋಸ್ಟ್‌ ಬಳಿ ರಸ್ತೆ ದಾಟುವಾಗ ಈ ಹಿಂದೆ ಅನೇಕ ಅಪಘಾತಗಳಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹೆದ್ದಾರಿಯಲ್ಲಿ ವೇಗವಾಗಿ ಬರುವ ವಾಹನಗಳಿಗೆ ಎದುರಿಗೆ ಬರುವ ದ್ವಿಚಕ್ರ ವಾಹನಗಳು ಕಾಣಿಸದೆ ಅಪಘಾತಗಳು ಹೆಚ್ಚಾಗುತ್ತಿದ್ದವು. ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೇಲ್ಸುತುವೆ ನಿರ್ಮಿಸುತ್ತಿದೆ.  ಸೇತುವೆ ಕೆಳಗಿನಿಂದ ವಾಹನಗಳು ಸಾಗುವುದರಿಂದ ರಾಷ್ಟ್ರೀಯ ಹೆದ್ದಾರಿಯನ್ನು ಸುರಕ್ಷಿತವಾಗಿ ದಾಟಲು ಸಾಧ್ಯವಾಗಲಿದೆ.

ಹೆದ್ದಾರಿ ಪಕ್ಕದಲ್ಲಿ ಸರ್ವಿಸ್ ರಸ್ತೆ ಮಾಡಿರುವುದರಿಂದ ಮಾಗಡಿ ಕಡೆಯಿಂದ ಬರುವ ವಾಹನಗಳು ನೇರವಾಗಿ ಹೆದ್ದಾರಿಗೆ ಬರದೆ ಸರ್ವಿಸ್ ರಸ್ತೆ ಮೂಲಕ ಸಾಗಿ, ಜಾನ್ಸನ್ ಬಳಿ ಹೆದ್ದಾರಿಗೆ ಸೇರಿಕೊಳ್ಳುತ್ತದೆ. ಇದರಿಂದ ಅಪಘಾತಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಪ್ರಾಧಿಕಾರದ ಈ ಕಾರ್ಯ ವ್ಯಾಪಾರಸ್ಥರಿಗೆ ತೊಂದರೆಯಾಗಬಹುದಾದರೂ ಸಾರ್ವಜನಿಕರ ಪ್ರಾಣ ಉಳಿಸುವ ಕೆಲಸವಾಗಿದೆ. ಇನ್ನೊಂದು ವರ್ಷದಲ್ಲಿ ಕಾರ್ಯ ಪೂರ್ಣಗೊಂಡು ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ಕಾರ್ಯವನ್ನು ಶೀಘ್ರ ಮುಗಿಸಿದರೆ ಸಮಸ್ಯೆ ತೀವ್ರತೆ ಕಡಿಮೆಯಾಗುತ್ತದೆ ಎಂಬುದು ಸ್ಥಳೀಯರು ಮತ್ತು ವಾಹನ ಚಾಲಕರ ಅಭಿಪ್ರಾಯವಾಗಿದೆ.

ADVERTISEMENT

ಜಾನ್ಸನ್ ಬಳಿ ಸಂಚಾರ ದಟ್ಟಣೆ: ರಾಷ್ಟ್ರೀಯ ಹೆದ್ದಾರಿ 75 ಜಾನ್ಸನ್ ಪ್ರದೇಶದಲ್ಲಿ ಶನಿವಾರ, ಭಾನುವಾರ ಮತ್ತು ರಜಾದಿನಗಳಲ್ಲಿ ಅಧಿಕ ಸಂಚಾರದಿಂದ ದೊಡ್ಡ ದಟ್ಟಣೆ ಸಂಭವಿಸುತ್ತಿತ್ತು. ಜಾನ್ಸನ್ ಸರ್ಕಲ್‌ನಲ್ಲಿ ಬೆಂಗಳೂರಿನಿಂದ ಬರುವ ವಾಹನಗಳು ಎಡಕ್ಕೆ ತಿರುಗಿ ಕುಣಿಗಲ್‌ಗೆ ಹೋಗಬೇಕು. ಕುಣಿಗಲ್‌ನಿಂದ ಬರುವ ವಾಹನಗಳು ಬಲಕ್ಕೆ ತಿರುಗಿ ಹೆದ್ದಾರಿ ಸೇರಬೇಕು.

ಈ ಎರಡೂ ದಿಕ್ಕು ಕೂಡುವಡೆಯಲ್ಲಿಯೇ ಹಾಸನ-ಧರ್ಮಸ್ಥಳದಿಂದ ಬರುವ ವಾಹನಗಳು ಸೇರುತ್ತವೆ. ಹೊಟೇಲ್ ಅಥವಾ ವಿಶ್ರಾಂತಿಗಾಗಿ ರಸ್ತೆ ಅಂಚಿನಲ್ಲಿ ವಾಹನಗಳು ನಿಲ್ಲಿಸುವುದರಿಂದಲೂ ದಟ್ಟಣೆ ಹೆಚ್ಚಾಗುತ್ತಿತ್ತು. ಕಿಲೋಮೀಟರ್‌ ವಾಹನಗಳ ಸರತಿ ನಿಲ್ಲುತ್ತಿತ್ತು. ಈಗ ಪ್ರಾಧಿಕಾರ ಸರ್ವಿಸ್ ರಸ್ತೆ ನಿರ್ಮಿಸಿ ಮುಖ್ಯ ರಸ್ತೆಗೆ ನೇರ ಪ್ರವೇಶವಿಲ್ಲದಂತೆ ಕಬ್ಬಿಣದ ಗರಾಟೆ ಹಾಕುತ್ತಿದೆ. ಇದರಿಂದ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆಯಾಗಲಿದೆ. ಸರ್ವಿಸ್ ರಸ್ತೆ ಕಾರ್ಯ ಇನ್ನೂ ನಡೆಯುತ್ತಿರುವುದರಿಂದ ಸಮಸ್ಯೆ ಸಂಪೂರ್ಣ ಮುಕ್ತಿಗಾಗಿ ಸ್ವಲ್ಪ ಸಮಯ ಬೇಕಿದೆ. ಪ್ರಾಧಿಕಾರದ ಈ ಪ್ರಯತ್ನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಮುಖ ರಾಷ್ಟ್ರೀಯ ಹೆದ್ದಾರಿ: ರಾಷ್ಟ್ರೀಯ ಹೆದ್ದಾರಿ 75 ಬಹಳ ಮುಖ್ಯ ರಸ್ತೆ. ಬೆಂಗಳೂರಿನಿಂದ ಕುಣಿಗಲ್, ಹಾಸನ, ಧರ್ಮಸ್ಥಳ, ಚಿಕ್ಕಮಗಳೂರು, ಮಂಗಳೂರು ಮುಂತಾದ ಊರುಗಳಿಗೆ ಹೋಗುವ ಪ್ರವಾಸಿಗಳು ಇದನ್ನೇ ಬಳಸುತ್ತಾರೆ. ಜಾನ್ಸನ್ ಬಳಿ ಏಕಕಾಲದಲ್ಲಿ ಹಲವು ದಿಕ್ಕಿನಿಂದ ವಾಹನಗಳು ಸೇರುವುದರಿಂದ ಸಂಚಾರ ದಟ್ಟಣೆ  ತೀವ್ರವಾಗಿತ್ತು. ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು, ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮನವಿ ಮಾಡಿ ಮೇಲ್ಸುತುವೆ ನಿರ್ಮಾಣ ಮತ್ತು ಸಂಚಾರ ಠಾಣೆ ಸ್ಥಾಪನೆ ಮಾಡಲು ಒತ್ತಾಯಿಸಿದ್ದರು. ಈಗ ಸರ್ವಿಸ್ ರಸ್ತೆ ಕಾರ್ಯ ಹಮ್ಮಿಕೊಳ್ಳಲಾಗಿದೆ. ಮುಖ್ಯ ರಸ್ತೆಗೆ ನೇರ ಪ್ರವೇಶ ತಡೆಯಲಾಗುತ್ತಿದೆ. ಇದರಿಂದ ದಟ್ಟಣೆ ಸಮಸ್ಯೆ ಕಡಿಮೆಯಾಗಲಿದೆ. 

ಜಾನ್ಸನ್ ಬಳಿ ಸರ್ವೆಸ್ ರಸ್ತೆ ಕಾಮಗಾರಿ ನಡೆಯುತ್ತಿರುವುದು
ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ಮುಖ್ಯರಸ್ತೆ ಜಾನ್ಸನ್ ಸರ್ಕಲ್
ಬಸ್‌ ನಿಲ್ದಾಣ ಶೌಚಾಲಯ ನಿರ್ಮಿಸಿ 
ತಾಳೆಕೆರೆ ಹ್ಯಾಂಡ್ ಪೋಸ್ಟ್‌ ಬಳಿ ಸರ್ವಿಸ್ ರಸ್ತೆ ಮತ್ತು ಮೇಲ್ಸುತುವೆ ನಿರ್ಮಾಣದಿಂದ ಅನುಕೂಲವಾಗಲಿದೆ. ಸರ್ವಿಸ್ ರಸ್ತೆಯಲ್ಲಿ ಬೀದಿ ದೀಪಗ ಅಳವಡಿಸಬೇಕು. ಅಲ್ಲದೆ ತಾಳೆಕೆರೆ ಹ್ಯಾಂಡ್ ಪೋಸ್ಟ್‌ನಿಂದ ಮಾಗಡಿ ಮತ್ತು ಇತರ ಕಡೆಗೆ ಹೋಗಲು ಸೂಕ್ತ ಸ್ಥಳದಲ್ಲಿ ಬಸ್ ನಿಲ್ದಾಣ ಮತ್ತು ಶೌಚಾಲಯ ನಿರ್ಮಿಸಿ ಪ್ರಯಾಣಿಕರ ಅನುಕೂಲ ಮಾಡಿಕೊಡಬೇಕು ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದರಾಜು ಅಭಿಪ್ರಾಯಪಟ್ಟಿದ್ದಾರೆ.
ವಾಹನ ಚಾಲಕರಿಗೆ ಅನುಕೂಲ 
ಸರ್ವಿಸ್ ರಸ್ತೆ ಮತ್ತು ಮೇಲ್ಸುತುವೆ ಕಾರ್ಯವನ್ನು ವಿಳಂಬವಿಲ್ಲದೆ ವೇಗವಾಗಿ ಪೂರ್ಣಗೊಳಿಸಿದರೆ ವಾಹನ ಚಾಲಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇಲ್ಲದಿದ್ದರೆ ವಾಹನ ದಟ್ಟಣೆಯಿಂದ ಸ್ಥಳೀಯರು ಮತ್ತು ವಾಹನ ಚಾಲಕರಿಗೆ ತೊಂದರೆಯಾಗಬಹುದು. ಮೇಲ್ಸುತುವೆ ನಿರ್ಮಾಣ ಬಹಳ ಉಪಯುಕ್ತವಾಗಿದೆ ಮತ್ತು ಅಪಘಾತಗಳು ಕಡಿಮೆಯಾಗುವ ನಿರೀಕ್ಷೆಯಿದೆ. ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಜಿ.ಪಂ ಮಾಜಿ ಸದಸ್ಯ ಎಂ.ಕೆ. ಧನಂಜಯ ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.