ಚರಂಡಿ ವ್ಯವಸ್ಥೆ ಇಲ್ಲದೆ ರಾಜಕಾಲುವೆಯಲ್ಲಿ ಹರಿಯುತ್ತಿರುವ ಕೊಳಚೆ ನೀರು
ಹಾರೋಹಳ್ಳಿ: ಪಟ್ಟಣದ ಹೃದಯ ಭಾಗದ ಚಾಮುಂಡೇಶ್ವರಿ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯ ಮರೀಚಿಕೆಯಾಗಿದ್ದು, ಇಲ್ಲಿನ ನಿವಾಸಿಗಳು ಸೌಲಭ್ಯಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಆದರೆ, ಪಟ್ಟಣ ಪಂಚಾಯಿತಿ ಮಾತ್ರ ಗಾಢ ನಿದ್ರೆಗೆ ಜಾರಿದಂತಿದೆ.
ಚರಂಡಿ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಗಬ್ಬು ನಾರುತ್ತಿರುವ ರಾಜಕಾಲುವೆ ಇಂತಹ ಹತ್ತು ಹಲವು ಸಮಸ್ಯೆಗಳನ್ನು ಬಡಾವಣೆ ನಿವಾಸಿಗಳು ಎದುರಿಸುತ್ತಿದ್ದಾರೆ. ಆದರೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಚರಂಡಿಗಳೇ ಇಲ್ಲ:
ಚಾಮುಂಡೇಶ್ವರಿ ಬಡಾವಣೆಯಲ್ಲಿ ಚರಂಡಿಗಳೇ ಇಲ್ಲದಾಗಿದೆ. ಇದರಿಂದ ನಿವಾಸಿಗಳು ಪ್ರತಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮಳೆ ಬಂದರಂತೂ ಕಾಂಕ್ರೀಟ್ ರಸ್ತೆ ಇಲ್ಲದ ಕಾರಣ ರಸ್ತೆಯೆಲ್ಲಾ ಕೆಸರು ಗದ್ದೆಯಾಗಲಿದ್ದು ಓಡಾಡಲು ಕಷ್ಟವಾಗುತ್ತಿದೆ. ಇಲ್ಲಿನ ರಾಜಕಾಲುವೆಗೆ ಮೂತ್ರದ ನೀರು ಎಲ್ಲವೂ ಹರಿಯುತ್ತಿದ್ದು, ಇದರಿಂದ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿದ್ದಾರೆ. ಈ ಬಗ್ಗೆ ಮುಖ್ಯಾಧಿಕಾರಿಗೆ ತಿಳಿಸಿದರೂ ಪ್ರಯೋಜನ ಇಲ್ಲವಂತಾಗಿದೆ ಎಂಬುದು ಇಲ್ಲಿನ ನಿವಾಸಿಗಳ ಆರೋಪವಾಗಿದೆ.
ಎರಡೆರಡು ಬಾರಿ ಪೂಜೆ: ಈ ಬಡಾವಣೆಯಲ್ಲಿ ಮೂಲ ಸೌಲಭ್ಯ ಕಲ್ಪಿಸುವ ಸಲುವಾಗಿ ಈ ಹಿಂದೆ ಇದ್ದ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಭೂಮಿ ಪೂಜೆ ನೆರವೇರಿಸಿದ್ದರು. ಜೊತೆಗೆ ಈಗಿನ ಶಾಸಕ ಇಕ್ಬಾಲ್ ಹುಸೇನ್ ಅವರೂ ಸಹ ಭೂಮಿ ಪೂಜೆ ನೆರವೇರಿಸಿದರೂ ಒಂದು ಕಲ್ಲಿ ಸಹ ನೆಟ್ಟಿಲ್ಲ. ಜೊತೆಗೆ ಕಾವೇರಿ ನೀರು ಹಾರೋಹಳ್ಳಿಯ ಎಲ್ಲಾ ಬಡಾವಣೆಗೂ ನೀಡಿದ್ದೇವೆ ಎಂದು ಹೇಳುತ್ತಾರೆ. ಆದರೆ, ನಮ್ಮ ಬಡಾವಣೆಗೆ ಮಾತ್ರ ಇಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ನಿವಾಸಿಗಳು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲಾಡಳಿತ ಸೇರಿದಂತೆ ಎಲ್ಲರಿಗೂ ಸಹ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯಲಾಗಿದೆ. ಆದರೆ. ಈ ಬಡಾವಣೆಯ ಸಮಸ್ಯೆ ಮಾತ್ರ ತೀರಿಲ್ಲ ಎಂಬುದು ಇಲ್ಲಿನ ನಿವಾಸಿಗಳ ಮಾತಾಗಿದೆ.
ಈ ಬಡಾವಣೆಗೆ ಮೂಲ ಸೌಲಭ್ಯ ಒದಗಿಸಿ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಮನವಿ ನೀಡಲು ಹೋದರೆ ಎಷ್ಟೋ ಬಾರಿ ಬೈದು ಅರ್ಜಿ ಸಹ ತೆಗೆದುಕೊಳ್ಳದೆ ಆಚೆ ಕಳುಹಿಸಿದ್ದಾರೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆಗಾಗಿ ಪ್ರಜಾವಾಣಿ ವರದಿಗಾರರು ಮುಖ್ಯಾಧಿಕಾರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸಲಿಲ್ಲ.
ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಲಿ
ಚಾಮುಂಡೇಶ್ವರಿ ಬಡಾವಣೆಯಲ್ಲಿ ನೂರಾರು ಕುಟುಂಬಗಳು ವಾಸಿಸುತ್ತಿದ್ದೇವೆ. ಆದರೂ, ಇಲ್ಲಿನ ನಿವಾಸಿಗಳಿಗೆ ಸಮರ್ಪಕವಾಗಿ ಮೂಲಭೂತ ಸೌಲಭ್ಯಗಳಿಲ್ಲ. ತೆರಿಗೆ ಮಾತ್ರ ಕಟ್ಟುತ್ತಿದ್ದೇವೆ. ನಮ್ಮ ಸಮಸ್ಯೆ ಬಗ್ಗೆ ಎಲ್ಲರಿಗೂ ಮನವಿ ಮಾಡಿದ್ದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು.
– ಯಶೋಧ, ಚಾಮುಂಡೇಶ್ವರಿ ಬಡಾವಣೆ ನಿವಾಸಿ
ಸೌಲಭ್ಯಕ್ಕಾಗಿ ಪ್ರಧಾನಿಗೆ ಪತ್ರ
ಈ ಬಡಾವಣೆಯಲ್ಲಿ ಹತ್ತಾರು ವರ್ಷಗಳಿಂದ ವಸಿಸುತ್ತಿದ್ದೇವೆ. ಆದರೆ ನಮಗೆ ಮೂಲಭೂತ ಸೌಲಭ್ಯ ಕಲ್ಪಿಸುವ ಕೆಲಸವನ್ನು ಯಾರೂ ಮಾಡಿಲ್ಲ. ಈಗಿರುವ ಮುಖ್ಯಾಧಿಕಾರಿಯಂತೂ ಸಮಸ್ಯೆ ಬಗೆಹರಿಸುವುದಿರಲಿ. ನಮ್ಮ ಕಷ್ಟ ಕೇಳುವ ಸಾವಧಾನ ತೋರಿಸುತ್ತಿಲ್ಲ. ಮೂಲಭೂತ ಸೌಲಭ್ಯಕ್ಕಾಗಿ ಪ್ರಧಾನಿಯವರಿಗೆ ಪತ್ರ ಬರೆಯಬೇಕೆ ಎಲ್ಲಿಗೆ ಬಂತು ನಮ್ಮ ಆಡಳಿತ ಶಾಹಿ ಎಂಬುದೇ ತಿಳಿಯುತ್ತಿಲ್ಲ.
– ರಾಜು, ಚಾಮುಂಡೇಶ್ವರಿ ಬಡಾವಣೆ ನಿವಾಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.