ADVERTISEMENT

ಚನ್ನಪಟ್ಟಣ: ಕೋವಿಡ್ ಲಸಿಕೆಗೆ ಮುಗಿಬಿದ್ದ ಜನ

ಲಸಿಕೆ ಲಭ್ಯವಿರುವ ಮಾಹಿತಿ ಇಲ್ಲದೆ ಪರದಾಟ

​ಪ್ರಜಾವಾಣಿ ವಾರ್ತೆ
Published 26 ಮೇ 2021, 2:55 IST
Last Updated 26 ಮೇ 2021, 2:55 IST
ಚನ್ನಪಟ್ಟಣದ ನಗರಸಭೆ ಆವರಣದಲ್ಲಿ ಕೋವಿಡ್ ಲಸಿಕೆ ಪಡೆಯಲು ನಿಂತಿದ್ದ ಜನ
ಚನ್ನಪಟ್ಟಣದ ನಗರಸಭೆ ಆವರಣದಲ್ಲಿ ಕೋವಿಡ್ ಲಸಿಕೆ ಪಡೆಯಲು ನಿಂತಿದ್ದ ಜನ   

ಚನ್ನಪಟ್ಟಣ: ತಾಲ್ಲೂಕಿನಲ್ಲಿ ಕೋವಿಡ್ ಲಸಿಕೆಗೆ ಬಹಳ ಬೇಡಿಕೆ ಬಂದಿದ್ದು, ಪಟ್ಟಣದ ನಗರಸಭೆ ಆವರಣದಲ್ಲಿ ಜನರು ಲಸಿಕೆ ಪಡೆಯಲು ಮುಗಿಬಿದ್ದ ಘಟನೆ ಮಂಗಳವಾರ ನಡೆಯಿತು.

ಲಸಿಕೆ ಪಡೆಯಲು ಸೋಮವಾರವೂ ಜನರು ಜಮಾಯಿಸಿದ್ದರು. ಇದು ಮಂಗಳವಾರವೂ ಮುಂದುವರೆಯಿತು. ಮೊದಲಿಗೆ ಲಸಿಕೆ ಪಡೆಯಲು ನಿರ್ಲಕ್ಷ್ಯ ತೋರಿದ್ದ ಜನ ಇಂದು ನಾಮುಂದು ತಾಮುಂದು ಎಂದು ಲಸಿಕೆ ಹಾಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಭರದಲ್ಲಿ ಕೊರೊನಾ ಸೋಂಕು ಹರಡುವ ಭಯವಿಲ್ಲದೆ, ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದಿರುವುದು ಭೀತಿಗೆ ಕಾರಣವಾಗಿದೆ.

ಕೊರೊನಾ ಲಸಿಕೆ ಮುಗಿದ ನಂತರ ಭೀತಿಗೆ ಒಳಗಾಗಿದ್ದ ಜನತೆ, ಹೊಸ ಲಸಿಕೆ ಬಂದ ನಂತರ ಜನತೆ ಮುಗಿಬಿದ್ದಿದ್ದಾರೆ.

ADVERTISEMENT

‘ತಾಲ್ಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆಯು ಲಸಿಕೆ ಎಷ್ಟು ಬಂದಿದೆ, ಎಷ್ಟು ಮಂದಿಗೆ ಲಸಿಕೆ ನೀಡುತ್ತೇವೆ. ಮೊದಲ ಅಥವಾ ಎರಡನೇ ಡೋಸ್ ನೀಡುತ್ತೇವೆ. ಎಷ್ಟು ಮಂದಿ ಬರಬೇಕು. ಎಷ್ಟೊತ್ತಿಗೆ ಬರಬೇಕು ಎಂಬ ಮಾಹಿತಿ ನೀಡುತ್ತಿಲ್ಲ. ಹಾಗಾಗಿ ಜನತೆ ಲಸಿಕೆ ಮುಗಿಯುವ ಭೀತಿಗೆ ಒಳಗಾಗಿ ಮುಗಿಬಿದ್ದಿದ್ದಾರೆ’ ಎಂದು ಲಸಿಕೆ ಪಡೆಯಲು ನಿಂತಿದ್ದ ಪಟ್ಟಣದ ಮಹೇಶ್ ತಿಳಿಸಿದರು.

‘ಪಟ್ಟಣದ ಕುಶಲಕರ್ಮಿ ತರಬೇತಿ ಕೇಂದ್ರದಲ್ಲಿ ಕೋವ್ಯಾಕ್ಸಿನ್ ಲಸಿಕೆ, ನಗರಸಭೆಯ ಆವರಣದಲ್ಲಿ ಕೋವಿಶೀಲ್ಡ್ ಲಸಿಕೆ ನೀಡುತ್ತಾರೆ. ತಾಲ್ಲೂಕಿನಾದ್ಯಂತ ಆದ್ಯತೆ ಮೇರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ನೀಡುತ್ತಾರೆ. ಜಿಲ್ಲಾಡಳಿತವು ಎಷ್ಟು ಲಸಿಕೆ ನೀಡುತ್ತೋ ಅಷ್ಟು ಲಸಿಕೆಯನ್ನು ನಾವು ಪ್ರತಿನಿತ್ಯ ನೀಡುತ್ತೇವೆ. ಪ್ರತಿನಿತ್ಯ ನಗರಸಭೆಯ ಆವರಣದಲ್ಲಿ 50 ಮಂದಿಗೆ ನೀಡುತ್ತಿದ್ದೇವೆ. 50 ಮಂದಿಗೆ ಮಾತ್ರ ಲಸಿಕೆ ಎಂದು ಸಿಬ್ಬಂದಿಗಳು ತಿಳಿಸಿದರೂ ಸಹ ಉಳಿದ ಮಂದಿಯೂ ನಿಂತೇ ಇರುತ್ತಾರೆ. ಹಾಗಾಗಿ ಸ್ವಲ್ಪ ಸಮಸ್ಯೆ ಎದುರಾಗಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿ ಮೊದಲು ಬಂದ 50 ಮಂದಿಗೆ ಲಸಿಕೆ ನೀಡುವ ಕ್ರಮ ಕೈಗೊಳ್ಳುತ್ತೇವೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಕೆ.ಪಿ. ರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.