ADVERTISEMENT

ಪ್ರಕೃತಿಯಲ್ಲಿ ನಿರುಪಯುಕ್ತ ವಸ್ತುಗಳಿಲ್ಲ

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 14:39 IST
Last Updated 9 ಜೂನ್ 2019, 14:39 IST

ರಾಮನಗರ: ಇಲ್ಲಿನ ಅರ್ಚಕರಹಳ್ಳಿಯ ನಂದಾದೀಪ ವೃದ್ಧಾಶ್ರಮದ ಆವರಣದಲ್ಲಿ ಅರ್ಪಿತ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನೆಡಲಾಯಿತು.

ಮಾನವನ ಬಳಕೆಗೆ ಬಾರದ ವಸ್ತಗಳೆಲ್ಲವೂ ಕಸ. ಆದರೆ, ಪ್ರಕೃತಿಗೆ ಉಪಯೋಗಕ್ಕೆ ಬಾರದ ವಸ್ತುಗಳು ಎಂಬುದಿಲ್ಲ. ಕಸ ಪ್ರಕೃತಿ ನಿಯಮದ ಪರಿವರ್ತನೆಯ ಭಾಗ ಎಂದು ಸಾಂಸ್ಕೃತಿಕ ಸಂಘಟಕಿ ಸಾವಿತ್ರಿರಾವ್ ತಿಳಿಸಿದರು.

‘ಪ್ರಕೃತಿ ಎಲ್ಲವನ್ನೂ ಉಪಯೋಗಿಸಿಕೊಳ್ಳುತ್ತಿದೆ. ದೇಹದಲ್ಲಿ ಉಸಿರಾಟ ಸ್ಥಗಿತವಾದರೆ ವಾಸನೆ ಬರುವ ಪ್ರಕ್ರಿಯೆ ಪರಿವರ್ತನೆ. ವಾತಾವರಣದಲ್ಲಿ ದೇಹ ಕೂಡ ವಿಲೀನವಾಗುತ್ತಿದೆ ಎನ್ನುವ ಸೂಚನೆ. ನಮ್ಮ ಸಾವು ಮತ್ತೊಂದು ಜೀವಕೋಶದ ಹುಟ್ಟಿಗೆ ಕಾರಣವಾಗುತ್ತದೆ. ಇಷ್ಟೇ ಪರಿವರ್ತನಾ ನಿಯಮ’ ಎಂದು ತಿಳಿಸಿದರು.

ADVERTISEMENT

‘ದಯಮಾಡಿ ಏನನ್ನೂ ಸುಡಬೇಡಿ. ನಿಮಗೆ ಅಗತ್ಯವಿರುವುದನ್ನು ಮಾತ್ರವೇ ಬಳಸಿಕೊಳ್ಳಿ. ಹೆಚ್ಚು ಬಳಸಬೇಡಿ. ಇದರಿಂದ ವಾತಾವರಣ ಕಲುಷಿತಗೊಳ್ಳುತ್ತದೆ. ಗಾಳಿಗೆ ಯಾವುದೇ ಸೀಮೆ ಇಲ್ಲ. ಸುಟ್ಟ ಕಸ ಆರೋಗ್ಯಕರ ವಾತಾವರಣದಲ್ಲಿ ಸೇರಿ ವಾತಾವರಣವನ್ನು ಕಲುಷಿತಗೊಳಿಸುತ್ತದೆ’ ಎಂದು ವಿವರಿಸಿದರು.

‘ಎಲ್ಲರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಪರಿಸರವು ಕಸದಿಂದಲೇ ಸಂಪನ್ಮೂಲದ ಶಕ್ತಿಯನ್ನು ತಾನೇ ಸದೃಢಗೊಳಿಸಿಕೊಳ್ಳುತ್ತದೆ. ಪ್ರತಿಯೊಬ್ಬರೂ ಪ್ರಕೃತಿಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು’ ಎಂದರು.

ಅರ್ಪಿತ ಚಾರಿಟಬಲ್ ಟ್ರಸ್ಟಿನ ಸಂಸ್ಥಾಪಕ ಎನ್.ವಿ. ಲೋಕೇಶ್, ಚಿತ್ರವಾಣಿ, ಲಕ್ಷ್ಮಮ್ಮ, ರಮಾದೇವಿ, ರಾಜ್, ಸರ್ವಸ್ವ ಗ್ರಾಮೀಣ ಟ್ರಸ್ಟಿನ ಎ.ಎಸ್. ಪ್ರೇಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.