ADVERTISEMENT

ತೆರಿಗೆ ಪಾವತಿಸದ ಕೈಗಾರಿಕೆಗೆ ನೋಟಿಸ್

ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಮಂಜುನಾಥ್ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 3:18 IST
Last Updated 19 ಜೂನ್ 2021, 3:18 IST
ಬಿಡದಿ ಯೋಗೇಶ್ವರ್ ಲೇಔಟ್‌ನ ಪುರಸಭಾ ಕಚೇರಿಯಲ್ಲಿ ಸಾಮಾನ್ಯ ಸಭೆ ನಡೆಯಿತು
ಬಿಡದಿ ಯೋಗೇಶ್ವರ್ ಲೇಔಟ್‌ನ ಪುರಸಭಾ ಕಚೇರಿಯಲ್ಲಿ ಸಾಮಾನ್ಯ ಸಭೆ ನಡೆಯಿತು   

ಬಿಡದಿ: ಪುರಸಭಾ ವ್ಯಾಪ್ತಿಯಲ್ಲಿ ತೆರಿಗೆ ಪಾವತಿಸದ ಕೈಗಾರಿಕೆಗೆ ನೋಟಿಸ್ ಜಾರಿ ಮಾಡಿ ಎಂದು ಶಾಸಕ ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಡದಿಯ ಯೋಗೇಶ್ವರ್ ಲೇಔಟ್‌ನಲ್ಲಿರುವ ನೂತನ ಪುರಸಭೆ ಕಟ್ಟಡದಲ್ಲಿ ಶುಕ್ರವಾರ ಪುರಸಭೆ ಸದಸ್ಯೆ ಸರಸ್ವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಪುರಸಭೆ ಖಾತೆಯಲ್ಲಿ ಎಷ್ಟು ಹಣ ಇದೆ, ಎಷ್ಟು ಬಾಕಿ ತೆರಿಗೆ ವಸೂಲಿಯಾಗಿದೆ ಎಂದು ಶಾಸರು ಅಧಿಕಾರಿಗಳನ್ನು ಪ್ರಶ್ನಿಸಿದರು.

ADVERTISEMENT

ಪುರಸಭೆ ಖಾತೆಯಲ್ಲಿ ₹ 50 ಲಕ್ಷ ಇದೆ. ವಾರ್ಷಿಕವಾಗಿ ಕೈಗಾರಿಕೆಗಳು ಸೇರಿದಂತೆ ಒಟ್ಟು ₹ 4.5ರಿಂದ ಐದು ಕೋಟಿ ತೆರಿಗೆ ವಸೂಲಿ ಆಗಬೇಕು. ಕೋವಿಡ್ ಕಾರಣದಿಂದಾಗಿ ತೆರಿಗೆ ವಸೂಲಿಗೆ ಹಿನ್ನಡೆಯಾಗಿದೆ ಎಂದು ಅಧಿಕಾರಿಗಳು ಉತ್ತರಿಸಿದರು. ಇದರಿಂದ ಸಮಾಧಾನಗೊಳ್ಳದ ಶಾಸಕ ಪುರಸಭೆ ವ್ಯಾಪ್ತಿಯಎಷ್ಟು ಕೈಗಾರಿಕೆಗಳು ಬಾಕಿ ಉಳಿಸಿಕೊಂಡಿದೆ. ಅವರಿಂದ ಏಕೆ ತೆರಿಗೆ ವಸೂಲಿ ಮಾಡುತ್ತಿಲ್ಲ. ಹೀಗಾದರೆ ಪಟ್ಟಣದ ಅಭಿವೃದ್ಧಿ ಹಾಗೂ ಜನರಿಗೆ ಮೂಲ ಸೌಲಭ್ಯ ಕಲ್ಪಿಸುವುದು ಹೇಗೆ ಎಂದು ಪ್ರಶ್ನೆ ಮಾಡಿದರು.

ಪುರಸಭೆ ವ್ಯಾಪ್ತಿಯಲ್ಲಿ 60 ಕೈಗಾರಿಕೆಗಳಿದ್ದು ಅವುಗಳಿಂದ ವಾರ್ಷಿಕ ಸರಾಸರಿ ₹ 4.35 ಕೋಟಿ ತೆರಿಗೆ ವಸೂಲಿ ಆಗಬೇಕು. ಬಹುತೇಕ ಕಾರ್ಖಾನೆಗಳು ತೆರಿಗೆ ಪಾವತಿಸಿಲ್ಲ. ಲಾಕ್‌ಡೌನ್ ಕಾರಣ ಕೈಗಾರಿಕೆಗಳನ್ನು ಮುಚ್ಚಿದ್ದರಿಂದ ನಷ್ಟವಾಗಿದೆ. ಬಡ್ಡಿ ಮನ್ನಾ ಮಾಡುವಂತೆ ವಿನಾಯಿತಿ ಕೋರಿ ಕೈಗಾರಿಕೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿವೆ ಎಂದು ಅಧಿಕಾರಿಗಳುವಿವರಿಸಿದರು.

ಕುಡಿಯುವ ನೀರು ಅಳವಡಿಕೆ ಹಾಗೂ ಯುಜಿಡಿ ಕಾಮಗಾರಿ ವಿಚಾರ ಚರ್ಚೆ ನಡೆಯಿತು. 22 ವಾರ್ಡ್‌ಗಳಲ್ಲಿ ಹಂತಹಂತವಾಗಿ ಕಾಮಗಾರಿ ಪ್ರಾರಂಭವಾಗಲಿದೆ. ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಹಾಗೂ ಯುಜಿಡಿ ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಶಾಸಕರು ಸಲಹೆ ನೀಡಿದರು.

ಬಿಡದಿ ಮುಖ್ಯರಸ್ತೆಯಲ್ಲಿರುವ ಪುರಸಭೆ ಕಚೇರಿಯನ್ನು ಯೋಗೇಶ್ವರ್ ಲೇಔಟ್‌ನಲ್ಲಿ ಹೊಸದಾಗಿ ನಿರ್ಮಿಸಿರುವ ನೂತನ ಕಟ್ಟಡಕ್ಕೆ ಸ್ಥಳಾಂತರ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಪುರಸಭೆ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಲೋಕೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.