ADVERTISEMENT

ನರೇಗಾ: ಕನಕಪುರ ತಾಲ್ಲೂಕಿಗೆ ಮೇಘಾಲಯ ರಾಜ್ಯದ ಅಧಿಕಾರಿಗಳ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 6:11 IST
Last Updated 12 ಜನವರಿ 2023, 6:11 IST
ಕನಕಪುರ ತಾಲ್ಲೂಕಿಗೆ ಭೇಟಿ ನೀಡಿದ ಮೇಘಾಲಯ ರಾಜ್ಯದ ಅಧಿಕಾರಿಗಳೊಂದಿಗೆ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ರಶ್ಮಿ, ರಾಮನಗರ ಜಿ.ಪಂ. ಸಿಇಒ ದಿಗ್ವಿಜಯ್‌ ಬೋಡ್ಕೆ, ಉಪಕಾರ್ಯದರ್ಶಿ ಟಿ.ಕೆ. ರಮೇಶ್ ಇದ್ದರು
ಕನಕಪುರ ತಾಲ್ಲೂಕಿಗೆ ಭೇಟಿ ನೀಡಿದ ಮೇಘಾಲಯ ರಾಜ್ಯದ ಅಧಿಕಾರಿಗಳೊಂದಿಗೆ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ರಶ್ಮಿ, ರಾಮನಗರ ಜಿ.ಪಂ. ಸಿಇಒ ದಿಗ್ವಿಜಯ್‌ ಬೋಡ್ಕೆ, ಉಪಕಾರ್ಯದರ್ಶಿ ಟಿ.ಕೆ. ರಮೇಶ್ ಇದ್ದರು   

ರಾಮನಗರ: ಮೇಘಾಲಯ ರಾಜ್ಯದ ಜಂಟಿ ಕಾರ್ಯದರ್ಶಿ ಡಿ.ಬಿ. ಗುಣಾಂಕ್ ನೇತೃತ್ವದ ಅಧಿಕಾರಿಗಳ ತಂಡವು ಬುಧವಾರ ಜಿಲ್ಲೆಯ ಕನಕಪುರ ತಾಲ್ಲೂಕಿಗೆ ಭೇಟಿ ನೀಡಿತು. ಭೇಟಿ ನೀಡಿ ವಿವಿಧ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ಪರಿಶೀಲಿಸಿತು.

ಕರ್ನಾಟಕದಲ್ಲಿ ಜಲ ಸಂರಕ್ಷಣೆ- ವೈಜ್ಞಾನಿಕ ಯೋಜನೆ ಅನುಷ್ಠಾನದ ಕುರಿತು ಅಧ್ಯಯನ ಮಾಡುವ ಉದ್ದೇಶದಿಂದ ತಾಲ್ಲೂಕಿಗೆ ಭೇಟಿ ನೀಡಿದ ಅಧಿಕಾರಿಗಳು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಅನುಷ್ಠಾನ ಮಾಡಲಾದ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿ, ಅಧಿಕಾರಿಗಳ ಬಳಿ ಮಾಹಿತಿ ಪಡೆದರು.

ಮೊದಲಿಗೆ ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಸಿಕೊಪ್ಪ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನ ಮಾಡಲಾದ ಗ್ರಾಮೀಣ ಉದ್ಯಾನಕ್ಕೆ ಭೇಟಿ ನೀಡಿದರು. ಸಾರ್ವಜನಿಕರಿಗೆ ಹಾಗೂ ಮಕ್ಕಳಿಗೆ ಉದ್ಯಾನದಿಂದ ಆಗುತ್ತಿರುವ ಅನುಕೂಲಗಳ ಬಗ್ಗೆ ಮಾಹಿತಿ ಪಡೆದರು.

ADVERTISEMENT

ಕಡಸಿಕೊಪ್ಪ ಸರ್ಕಾರಿ ಶಾಲೆಯ ಆವರಣದಲ್ಲಿ ಶಾಲಾ ಆಟದ ಮೈದಾನ ವೀಕ್ಷಿಸಿ, ಮಕ್ಕಳೊಂದಿಗೆ ಕ್ರೀಡಾ ಚಟುವಟಿಕೆ ಕುರಿತು ಸಂವಾದ ನಡೆಸಿದರು. ಚೀಲೂರು ಗ್ರಾಮ ಪಂಚಾಯಿತಿಯ ರಸ್ತೆ ಜಕ್ಕಸಂದ್ರ ಗ್ರಾಮದ ಚನ್ನಣ್ಣನ ಕೆರೆ ಅಭಿವೃದ್ದಿ ಕಾಮಗಾರಿ ವೀಕ್ಷಿಸಿ, ಸಾರ್ವಜನಿಕರ ವಾಯುವಿಹಾರಕ್ಕಾಗಿ ಮಾಡಲಾಗಿರುವ ವಾಕಿಂಗ್ ಪಾತ್
ಪರಿಶೀಲಿಸಿದರು.

ದ್ಯಾವಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೇಷ್ಮೆ ಇಲಾಖೆಯ ಯೋಜನೆಯಡಿ ಕೈಗೊಳ್ಳಲಾದ ರಾಜು, ಚೆಲುವೇಗೌಡ ಅವರ ಜಮೀನಲ್ಲಿ ಹಿಪ್ಪು ನೇರಳೆ ಕೃಷಿ ನಾಟಿ ಕಾಮಗಾರಿ ವೀಕ್ಷಿಸಿ, ಫಲಾನುಭವಿಯ ವಾರ್ಷಿಕ ಆದಾಯ ಹಾಗೂ ರೇಷ್ಮೆ ಕೃಷಿ ಬಗ್ಗೆ ಮಾಹಿತಿ ಪಡೆದರು. ಬನವಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಮಶಾನ ಅಭಿವೃದ್ಧಿ ಕಾಮಗಾರಿ ಮತ್ತು ಚೆಕ್ ಡ್ಯಾಂ ನಿರ್ಮಾಣದ ಅನುಕೂಲಗಳ ಬಗ್ಗೆ ರೈತರ ಬಳಿ ಸಂವಾದ ನಡೆಸಿದರು.

ವಿವಿಧ ಕಾಮಗಾರಿಗಳ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಬಳಿ ಮೇಘಾಲಯದ ತಂಡವು ಸಮಾಲೋಚನೆ ನಡೆಸಿತು.

ಈ ಸಂದರ್ಭ ಮಾತನಾಡಿದ ಡಿ.ಬಿ. ಗುಣಾಂಕ್ ‘ನರೇಗಾ ಯೋಜನೆ ಜಿಲ್ಲೆಯ ಜನರಿಗೆ ಬಹಳ ಹತ್ತಿರವಾಗಿವೆ. ಇಲ್ಲಿನ ಕಾಮಗಾರಿಗಳು ನಮಗೂ ಸಹ ಹೊಸ ಅನುಭವ ಮತ್ತು ಹೊಸ ಯೋಜನೆ ಕಲ್ಪಿಸಿವೆ. ಚೆಕ್ ಡ್ಯಾಂ, ಉದ್ಯಾನದ ರೂಪ ಮತ್ತು ವಿನ್ಯಾಸ ಬಹಳ ಅಚ್ಚುಕಟ್ಟಾಗಿ ನಿಭಾಸಿದ್ದಾರೆ. ಇಲ್ಲಿನ ಯೋಜನೆಗಳ ಬಗ್ಗೆ ನಮ್ಮ ರಾಜ್ಯಕ್ಕೆ ಪರಿಚಯ ಮಾಡಲು ಸೂಕ್ತವಾಗಿವೆ’ ಎಂದು ಸಂತಸ ವ್ಯಕ್ತಪಡಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಶ್ಮಿ, ಜಿ.ಪಂ. ಉಪ ಕಾರ್ಯದರ್ಶಿ ಟಿ.ಕೆ. ರಮೇಶ್, ರೇಷ್ಮೆ ಇಲಾಖೆ ಉಪನಿರ್ದೇಶಕ ಸಿ.ಡಿ. ಬಸವರಾಜು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.