ADVERTISEMENT

ತಿನ್ನೋಕೆ ಪೇಪರ್‌ ಬೂದಿ, ಕುಡಿಯೋಕೆ ಆಯಿಲ್‌–ಶಿವಮೊಗ್ಗದ ಕುಮಾರ್‌ಗೆ ಇದೇ ಆಹಾರ

ಶಿವಮೊಗ್ಗದ ಕುಮಾರ್ ಅಭ್ಯಾಸ ವೈದ್ಯಲೋಕಕ್ಕೆ ಅಚ್ಚರಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 13:42 IST
Last Updated 4 ಫೆಬ್ರುವರಿ 2019, 13:42 IST
ಆಯಿಲ್ ಸೇವನೆ ಮಾಡುತ್ತಿರುವ ಕುಮಾರ್
ಆಯಿಲ್ ಸೇವನೆ ಮಾಡುತ್ತಿರುವ ಕುಮಾರ್   

ರಾಮನಗರ: ಪೇಪರ್ ಸುಟ್ಟ ಬಳಿಕ ಸಿಗುವ ಬೂದಿ, ವಾಹನಗಳಿಗೆ ಬಳಸಿದ ಆಯಿಲ್‌–ಇದುವೇ ಇವರ ಆಹಾರ. ವರ್ಷಗಳಿಂದ ನೀರನ್ನೇ ಕುಡಿಯದ ಮನುಷ್ಯ ಇವರು.

ಈ ವ್ಯಕ್ತಿಯ ಹೆಸರು ಕುಮಾರ್. ಶಿವಮೊಗ್ಗದವರಾದ ಈತ ಸಾಮಾನ್ಯರಂತೆ ಆಹಾರ ಸೇವನೆ ಬದಲಿಗೆ ವಿಚಿತ್ರ ಅಭ್ಯಾಸಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸದ್ಯ ಶಬರಿಮಲೆಗೆ ಪಾದಯಾತ್ರೆ ಹಮ್ಮಿಕೊಂಡಿರುವ ಅವರು ಸೋಮವಾರ ನಗರದ ಕೆಂಪೇಗೌಡ ವೃತ್ತದಲ್ಲಿ ಹೀಗೆ ಪೇಪರ್ ಬೂದಿ, ಆಯಿಲ್‌ ಸೇವನೆ ಮಾಡಿ ಜನರನ್ನು ಚಕಿತಗೊಳಿಸಿದರು.

ತಾನು 17 ವರ್ಷದವನಿರುವಾಗ ಹಸಿವಿನಿಂದ ಕಂಗೆಟ್ಟು ಪೇಪರ್‌ ಸುಟ್ಟು ಬೂದಿ ತಿನ್ನಲು ಆರಂಭಿಸಿದ್ದಾಗಿ ಕುಮಾರ್ ಹೇಳುತ್ತಾರೆ. ಈಗ ಅವರಿಗೆ 40 ವರ್ಷ. ಕಳೆದೆರಡು ದಶಕದಿಂದ ಇದೇ ಪದ್ಧತಿ ಮುಂದುವರಿಸಿಕೊಂಡು ಬಂದಿರುವುದಾಗಿ ಅವರು ತಿಳಿಸುತ್ತಾರೆ.

ADVERTISEMENT

‘ಆರಂಭದಲ್ಲಿ ಮೂಟೆ ಹೊತ್ತು ಕೂಲಿ ಮಾಡುತ್ತಿದ್ದೆ. ಆದರೆ ಊಟಕ್ಕೆ ತುಂಬಾ ಪರದಾಡುತ್ತಿದ್ದೆ. ಹೀಗಾಗಿ ಹಸಿವು ನೀಗಿಸಿಕೊಳ್ಳಲು ಬೂದಿ ತಿಂದೆ. ದಾಹ ನೀಗಿಸಿಕೊಳ್ಳಲು ವೇಸ್ಟ್‌ ಆಯಿಲ್ ಕುಡಿದೆ. ನಂತರ ಅದೇ ಅಭ್ಯಾಸವಾಗಿ ಹೋಯಿತು. ಈಗ ಆಯಿಲ್ ಸಲೀಸಾಗಿ ಜೀರ್ಣ ಆಗುತ್ತದೆ. ಆದರೆ ಅನ್ನ ತಿಂದರೆ ವಾಂತಿಯಾಗುತ್ತದೆ’ ಎನ್ನುತ್ತಾರೆ ಕುಮಾರ್.

ಇಷ್ಟೆಲ್ಲ ರಾಸಾಯನಿಕ ಮಿಶ್ರಿತ ಆಯಿಲ್‌ ಕುಡಿದರೂ ಇವರ ಆರೋಗ್ಯ ಹದಗೆಟ್ಟಿಲ್ಲ. ಗಟ್ಟಿಮುಟ್ಟಾಗಿಯೇ ಇದ್ದು, ಎಲ್ಲರಂತೆ ಜೀವನ ನಡೆಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ನೀವು ಪ್ರಯತ್ನಿಸಬೇಡಿ

‘ಇಂತಹ ವ್ಯಕ್ತಿಗಳ ನಡವಳಿಕೆಗಳೇ ಅಚ್ಚರಿ ತಂದಿವೆ. ಪೇಪರ್, ಆಯಿಲ್‌ನಲ್ಲಿ ಸಾಕಷ್ಟು ರಾಸಾಯನಿಕ ಇದ್ದು, ಅವು ಜೀವಕ್ಕೆ ಅಪಾಯ ತರಬಲ್ಲವು. ಯಾರೋ ಒಬ್ಬರು ಕುಡಿದರೆಂದು ಬೇರೆಯವರು ಅದನ್ನು ಅನುಕರಿಸಲು ಹೊರಟರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಯಾರೂ ಇಂತಹ ಪ್ರಯೋಗಗಳಿಗೆ ಮುಂದಾದಬೇಡಿ’ ಎಂದು ಎಚ್ಚರಿಸುತ್ತಾರೆ ಸರ್ಕಾರಿ ಆಸ್ಪತ್ರೆಯ ವೈದ್ಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.