ADVERTISEMENT

ರಾಮನಗರ: ಉದ್ಯೋಗದ ಹೆಸರಿನಲ್ಲಿ ₹1.76 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 3:06 IST
Last Updated 30 ಜನವರಿ 2026, 3:06 IST
<div class="paragraphs"><p>ವಂಚನೆ</p></div>

ವಂಚನೆ

   

ರಾಮನಗರ: ಉದ್ಯೋಗದ ನೆಪದಲ್ಲಿ ಆನ್‌ಲೈನ್ ವಂಚಕರು ವ್ಯಕ್ತಿಯೊಬ್ಬರಿಗೆ ₹1.76 ಲಕ್ಷ ವಂಚಿಸಿದ್ದು, ಈ ಕುರಿತು ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಭಿಲಾಷ್ ವಂಚನೆಗೊಳಗಾದವರು. ಅಂತರ್ಜಾಲದಲ್ಲಿ ಉದ್ಯೋಗಾವಕಾಶದ ಲಿಂಕ್ ಕ್ಲಿಕ್‌ ಮಾಡಿದ ಅಭಿಲಾಷ್ ಅವರಿಗೆ ವಂಚಕರು ಕರೆ ಮಾಡಿ, ಹೂಡಿಕೆಗೆ ಸಂಬಂಧಿಸಿದ ಕೆಲ ಟಾಸ್ಕ್‌ಗಳನ್ನು ಪೂರೈಸುವಂತೆ ಸೂಚಿಸಿದ್ದಾರೆ.

ಅದರಂತೆ ಆರಂಭದಲ್ಲಿ, ಉದ್ಯೋಗಕ್ಕೆ ಸಂಬಂಧಿಸಿದ ಪ್ರಕ್ರಿಯೆಯ ಭಾಗವಾಗಿ ಮೊದಲಿಗೆ ₹14 ಸಾವಿರ, ನಂತರ ₹1.15 ಲಕ್ಷ ಹಾಗೂ ₹47 ಸಾವಿರ ವರ್ಗಾವಣೆ ಮಾಡುವಂತೆ ಬಂದ ಸೂಚನೆ ಮೇರೆಗೆ ಅಭಿಲಾಷ್ ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಂದ ವರ್ಗಾವಣೆ ಮಾಡಿದ್ದಾರೆ.

ADVERTISEMENT

ಹೂಡಿಕೆ ಮೊತ್ತಕ್ಕೆ ಕಮಿಷನ್ ನೀಡುವುದಾಗಿ ಹೇಳಿದ್ದ ವಂಚಕರು, ನಂತರ ಕರೆಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದಾರೆ. ಆಗ ಅಭಿಲಾಷ್ ಅವರು ತಾವು ವಂಚಕರ ಜಾಲಕ್ಕೆ ಸಿಲುಕಿರುವುದು ಗೊತ್ತಾಗಿದೆ. ನಂತರ ಅವರು ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾರ್‌ನಲ್ಲಿ ನಗದು ಕಳ್ಳತನ

ನಗರದ ಐಜೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಇರುವ ಸಂಗೀತಾ ಬಾರ್‌ ಆ್ಯಂಡ್ ರೆಸ್ಟೊರೆಂಟ್‌ಗೆ ರಾತ್ರಿ ನುಗ್ಗಿರುವ ಮೂವರು ಕಳ್ಳರು, ಕ್ಯಾಷ್ ಕೌಂಟರ್‌ನಲ್ಲಿ ಇಟ್ಟಿದ್ದ ₹8 ಸಾವಿರ ನಗದು ಕದ್ದೊಯ್ದಿದ್ದಾರೆ. ಈ ಕುರಿತು ಬಾರ್‌ ಕ್ಯಾಷಿಯರ್‌ ನೀಡಿದ ದೂರಿನ ಮೇರೆಗೆ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾರ್‌ನಲ್ಲಿ ಕೆಲಸ ಮಾಡುವವರು ಜ. 21ರಂದು ಎಲ್ಲಾ ವ್ಯವಹಾರ ಮುಗಿದ ಬಳಿಕ ರಾತ್ರಿ 11ರ ಸುಮಾರಿಗೆ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದರು. ಮಾರನೇಯ ದಿನ ಬಳಿಗ್ಗೆ 5.30ರ ಸುಮಾರಿಗೆ ಬಾರ್‌ನಲ್ಲಿ ಕೆಲಸ ಮಾಡುವ ಯುವಕನೊಬ್ಬ, ಕ್ಯಾಷಿಯರ್‌ಗೆ ಕರೆ ಮಾಡಿ ಕಳ್ಳತನದ ಕುರಿತು ಗಮನಕ್ಕೆ ತಂದಿದ್ದಾರೆ.

ಕೂಡಲೇ ರವೀಂದ್ರ ಅವರು ಬಾರ್ ಮಾಲೀಕರಿಗೆ ವಿಷಯ ತಿಳಿಸಿ, ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಕ್ಯಾಷ್ ಕೌಂಟರ್‌ನ ಡ್ರಾಯರ್‌ನಲ್ಲಿದ್ದ ನಗದು ಕದ್ದೊಯ್ದಿರುವುದು ಗೊತ್ತಾಗಿದೆ. ಬಾರ್‌ನ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ, ಮೂವರು ಕಳ್ಳರು ನಸುಕಿನ 3.30ಕ್ಕೆ ಬಂದು ಕೃತ್ಯ ಶಟರ್ ಮೀಟಿ ತೆಗೆದು ಒಳ ಹೋಗಿ ಎಸಗಿದ್ದು ಕ್ಯಾಮೆರಾದಲ್ಲಿ ದಾಖಲಾಗಿದೆ. ದೃಶ್ಯಾವಳಿ ಆಧರಿಸಿ ಕಳ್ಳರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.