ADVERTISEMENT

ಎಚ್‌ಡಿಕೆಯಿಂದ ಕ್ಷೇತ್ರ ಕಡೆಗಣನೆ: ಸಿ.ಪಿ.ಯೋಗೇಶ್ವರ್

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನ ವಿರುದ್ಧ ಸಿಪಿವೈ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2022, 5:38 IST
Last Updated 26 ಡಿಸೆಂಬರ್ 2022, 5:38 IST
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸಮ್ಮುಖದಲ್ಲಿ ವಿವಿಧ ಪಕ್ಷಗಳ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ಇತರರು ಇದ್ದರು
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸಮ್ಮುಖದಲ್ಲಿ ವಿವಿಧ ಪಕ್ಷಗಳ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ಇತರರು ಇದ್ದರು   

ಚನ್ನಪಟ್ಟಣ: ‘ತಾಲ್ಲೂಕಿನ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡದ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕ್ಷೇತ್ರದ ಜನತೆ ಮತ್ತೊಮ್ಮೆ ಏಕೆ ಗೆಲ್ಲಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಪ್ರಶ್ನಿಸಿದರು.

ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ‘ಕುಮಾರಸ್ವಾಮಿ ಮತ್ತೆ ಚನ್ನಪಟ್ಟಣದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.ಕಳೆದ ಬಾರಿ ತಾಲ್ಲೂಕಿನಿಂದ ಸ್ಪರ್ಧಿಸಿದ್ದ ಅವರ ಮೇಲೆ ಕ್ಷೇತ್ರದ ಜನ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದರು. ಇಲ್ಲಿಂದ ಗೆದ್ದು ಮುಖ್ಯಮಂತ್ರಿಯಾಗಿ ತಾಲ್ಲೂಕನ್ನು ಕಡೆಗಣಿಸಿದರು. ಈ ತಾಲ್ಲೂಕಿನಲ್ಲಿ ಇರುವ ಗ್ರಾಮಗಳು, ಮುಖಂಡರು, ಅಧಿಕಾರಿಗಳ ಹೆಸರೇ ಗೊತ್ತಿಲ್ಲದ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಅವಶ್ಯಕತೆ ಏನಿದೆ?’ ಎಂದರು.

‘ತಾಲ್ಲೂಕನ್ನು ಸಂಪೂರ್ಣ ನೀರಾವರಿ ಮಾಡಿದ್ದು ನಾನು. ಇಡೀ ತಾಲ್ಲೂಕನ್ನು ಸಂಪೂರ್ಣ ಅಭಿವೃದ್ಧಿ ಮಾಡುವ ನನ್ನ ಕನಸಿಗೆ ತಾಲ್ಲೂಕಿನ ಮತದಾರರು ಅವಕಾಶ ನೀಡಲಿಲ್ಲ. ನಾನು ಈ ಕ್ಷೇತ್ರದಲ್ಲಿ ಕೂಲಿ ಆಳಿನ ರೀತಿ ದುಡಿದಿದ್ದೇನೆ. ನನಗೆ ಕೂಲಿ ನೀಡದೆ ಮೂಲೆಗುಂಪು ಮಾಡಲಾಯಿತು. ನಾನು ಮಾಡಿದ್ದ ತಪ್ಪಾದರೂ ಏನು’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಕುಮಾರಸ್ವಾಮಿ ಕ್ಷೇತ್ರದ ಜನತೆಯ ಕಷ್ಟ ಕೇಳುತ್ತಿಲ್ಲ. ಜನರ ಮನೆಬಾಗಿಲಿಗೆ ಬರುತ್ತಿಲ್ಲ. ತಾಲ್ಲೂಕಿನ ಆಡಳಿತದಲ್ಲಿ ಹಿಡಿತವಿಲ್ಲ. ಕ್ಷೇತ್ರಕ್ಕೆ ಉತ್ಸವಮೂರ್ತಿ ರೀತಿ ಬಂದು ಹೋಗುತ್ತಿದ್ದಾರೆ. ನಾನು ಈ ಕ್ಷೇತ್ರದ ಅಭಿವೃದ್ಧಿಗೆ ಮುಂದಾದರೆ, ಅದಕ್ಕೂ ಅಡ್ಡಪಡಿಸುತ್ತಾರೆ. ಈಗ ತಾಲ್ಲೂಕಿನ ಜನತೆಗೆ ತಾವು ಮಾಡಿದ ತಪ್ಪಿನ ಅರಿವಾಗಿದ್ದು, ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುುವ ವಿಶ್ವಾಸವಿದೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ಬಿಜೆಪಿ ಕಾರ್ಯಕರ್ತರು ಯೋಗೇಶ್ವರ್ ನೇತೃತ್ವದಲ್ಲಿ ಹೊಂಗನೂರು ಗ್ರಾಮದಿಂದ ಬೈಕ್ ರ್ಯಾಲಿ ನಡೆಸಿದರು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ಅಪ್ಪಾಜಿಗೌಡ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲುವೇಗೌಡ, ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ಜಯರಾಮು, ಎಸ್. ಲಿಂಗೇಶ್ ಕುಮಾರ್, ವಿವಿಧ ಘಟಕಗಳ ಪದಾಧಿಕಾರಿಗಳು, ಸ್ಥಳೀಯ ಮುಖಂಡರು
ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.