ADVERTISEMENT

ಮಾಗಡಿ, ಕನಕಪುರದಲ್ಲಿ ಆಮ್ಲಜನಕ ಘಟಕ

ಕೆಆರ್‌ಐಡಿಎಲ್‌ನಿಂದ ನಿರ್ಮಾಣ: 20 ದಿನಗಳಲ್ಲಿ ಪೂರ್ಣವಾಗುವ ಭರವಸೆ

​ಪ್ರಜಾವಾಣಿ ವಾರ್ತೆ
Published 8 ಮೇ 2021, 3:29 IST
Last Updated 8 ಮೇ 2021, 3:29 IST

ರಾಮನಗರ: ಮಾಗಡಿ ಮತ್ತು ಕನಕಪುರದ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ದಿ ನಿಗಮ (ಕೆಆರ್‌ಐಡಿಎಲ್‌) ಮುಂದಾಗಿದೆ.

ಈ ಸಂಬಂಧ ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್‌ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಮಾಹಿತಿ ಹಂಚಿಕೊಂಡರು. ನಂತರ ಪತ್ರಕರ್ತರಿಗೆ ಈ ಕುರಿತು ಮಾಹಿತಿ ನೀಡಿದ ರುದ್ರೇಶ್‌ ‘ನಿಗಮದ ಸಿಎಸ್‌ಆರ್‌ ನಿಧಿಯಲ್ಲಿ ಈ ಘಟಕ ಸ್ಥಾಪಿಸಲಾಗುತ್ತಿದೆ. ಕನಕಪುರ ಮತ್ತು ಮಾಗಡಿ ತಾಲೂಕುಗಳಿಗೆ ಅನುಕೂಲವಾಗುವಂತೆ ತಲಾ ಒಂದು ಆಮ್ಲಜನಕ ಉತ್ಪಾದನಾ ಘಟಕ ಮತ್ತು ತಲಾ 500 ಸಂಖ್ಯೆಯ ಆಮ್ಲಜನಕ ಕಾನ್‌ಸನ್‌ಟ್ರೇಟರ್‌ಗಳನ್ನು ಪೂರೈಸುವಂತೆ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ಮನವಿ ಮಾಡಿದ್ದರು. ಮುಖ್ಯಮಂತ್ರಿಗಳು ಇದಕ್ಕೆ ಅನುಮತಿ ಸೂಚಿಸಿದ್ದಾರೆ’ ಎಂದು ವಿವರಿಸಿದರು.

ಎರಡೂ ಕಡೆ ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದ್ದು, ಮುಂದಿನ 20 ದಿನಗಳಲ್ಲಿ ಪೂರ್ಣವಾಗುವ ಭರವಸೆ ಇದೆ. ತಕ್ಷಣಕ್ಕೆ ಚಾಮರಾಜನಗರ ಜಿಲ್ಲೆಯಲ್ಲಿಯೂ ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆಯಾಗಲಿದೆ. ಮುಖ್ಯಮಂತ್ರಿ ಅನುಮತಿಯ ಮೇರೆಗೆ ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಇಂತಹ ಘಟಕ ಸ್ಥಾಪನೆಗೆ ಅವಕಾಶವಿದೆ ಎಂದರು.

ADVERTISEMENT

ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ಕೈ ಮೀರಿಲ್ಲ. ಜನರು ಅನಾವಶ್ಯಕವಾಗಿ ಓಡಾಡಬಾರದು, ಕೋವಿಡ್ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

ಬಿಡದಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವರದರಾಜ ಗೌಡ, ಬಿಜೆಪಿ ಮುಖಂಡ ಎಸ್.ಆರ್.ನಾಗರಾಜು, ಡಿಎಚ್‌ಒ ನಿರಂಜನ್, ಕೆಆರ್‌ಐಡಿಎಲ್‌ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.