ರಾಮನಗರ: ಭಾವಸಾರ ಕ್ಷತ್ರಿಯ ಸಮುದಾಯದಿಂದ ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಪಾಂಡುರಂಗ ಹಾಗೂ ರುಕ್ಮಿಣಿ ದಿಂಡಿ ಮಹೋತ್ಸವವನ್ನು ಭಾನುವಾರ ಅದ್ಧೂರಿಯಾಗಿ ಆಚರಿಸಲಾಯಿತು. ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆದ ಮಹೋತ್ಸವಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಸಮುದಾಯದವರು ಸಾಕ್ಷಿಯಾದರು.
ಮಂಟಪದಲ್ಲಿ ಪಾಂಡುರಂಗ ಹಾಗೂ ರುಕ್ಮಿಣಿ ಉತ್ಸವಮೂರ್ತಿ ಸ್ಥಾಪಿಸಿ, ಬೆಳಿಗ್ಗೆ 6 ಗಂಟೆಯಿಂದಲೇ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಲಾಯಿತು. ವಾರ್ಕರೆಗಳು ಕಾಕಡಾರತಿ ನಡೆಸಿದ ಬಳಿಕ, ಶ್ರೀರಾಮ ದೇವಾಲಯ ಆರ್ಚಕ ನರಸಿಂಹ ಭಟ್ಟ ನೇತೃತ್ವದಲ್ಲಿ ಅಭಿಷೇಕ ಹಾಗೂ ಪೂಜೆ ಜರುಗಿತು.
ವೀಣಾಕರಿ ಸೇರಿದಂತೆ 20 ವಾರ್ಕರೆಗಳು ಪಾಂಡುರಂಗ ಸ್ವಾಮಿಯ ಭಕ್ತಿಯ ಲೀಲೆಗಳನ್ನು ಬಣ್ಣಿಸುವ ಭಜನೆಗಳನ್ನು ಹಾಡಿದರು. ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿತು. ಮಹೋತ್ಸವದ ಅಂಗವಾಗಿ ಅಲಂಕೃ ದೇವರ ಮೂರ್ತಿಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ದೇವಾಲಯದಿಂದ ಶುರುವಾದ ಮೆರವಣಿಗೆ ಆಗ್ರಹಾರ, ಎಂ.ಜಿ. ರಸ್ತೆ, ಮುಖ್ಯ ರಸ್ತೆ, ಛತ್ರದ ಬೀದಿ ಹಾದು ದೇವಾಲಯ ತಲುಪಿತು.
ವೀಣಾಕರಿಯಾಗಿ ಬೆಂಗಳೂರಿನ ಯಶವಂತಪುರ ಭಾವಸಾರ ಕ್ಷತ್ರಿಯ ಸಮಾಜದ ದೇವೇಂದ್ರಕುಮಾರ್(ಬಾಬು ರಾವ್) ನಡೆಸಿಕೊಟ್ಟರು. ಕನಕಪುರದಿಂದ ಬಂದಿದ್ದ ಸಮುದಾಯದ ಮಹಿಳೆಯರು ಹಾಗೂ ರಾಮನಗರದ ಶ್ರೀಲಕ್ಷ್ಮೀ ತಂಡದವರು ಭಜನೆ ಗಮನ ಸೆಳೆಯಿತು. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಮುಖಂಡರು ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.
ರಾಮನಗರ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಗಣೇಶ್ ರಾವ್, ಉಪಾಧ್ಯಕ್ಷ ಕಿರಣ್ ರಾವ್ ಬಾಂಬೊರೆ, ಕಾರ್ಯದರ್ಶಿ ಮಂಜುನಾಥ್ ಬಾಂಬೊರೆ, ಖಜಾಂಚಿ ಮಧುಸೂಧನ್ ರಾವ್ ಬಾಂಬೊರೆ, ಹಿರಿಯರಾದ ನಾಗರಾಜ್ ರಾವ್ ಬಾಂಬೊರೆ, ನಂಜುಂಡ ರಾವ್ ಪಿಸ್ಸೆ, ಉಮೇಶ್ ರಾವ್ ಜಿಂಗಾಡೆ, ಲತಾ ಜಿಂಗಾಡೆ, ರೇಖಾ ಕುಮಾರ್ ಪತಂಗೆ, ರಾಜೇಶ್ವರಿ ಬಾಯಿ, ಸುಪ್ರಿಯಾ, ರೇಖಾ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.