ರಾಮನಗರ: ‘ಜಿಲ್ಲೆಯ ಭಾವಸಾರ ಕ್ಷತೀಯ ಸಮಾಜದ ವತಿಯಿಂದ ಪಾಂಡುರಂಗ ಸ್ವಾಮಿಯ ದಿಂಡಿ ಮಹೋತ್ಸವವನ್ನು ಜುಲೈ 28ರಂದು ಹಮ್ಮಿಕೊಳ್ಳಲಾಗಿದೆ. ಅಂದು ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ವಿವಿಧ ಧಾರ್ಮಿಕ ಕಾರ್ಯ ಮಾಡಲಾಗುವುದು’ ಎಂದು ನಗರದ ಭಾವಸಾರ ಕ್ಷತ್ರಿಯ ಸಮುದಾಯದ ಅಧ್ಯಕ್ಷ ಗಣೇಶ್ ರಾವ್ ಕಾಕಡೆ ಹೇಳಿದರು.
‘ಮೊದಲ ಬಾರಿಗೆ ಜಿಲ್ಲೆಯಲ್ಲಿ ಆಯೋಜಿಸಿರುವ ಮಹೋತ್ಸವ ಸಮುದಾಯದ ಸಂಸ್ಕತಿ ಹಾಗೂ ಕಲೆಯ ಅನಾವರಣಕ್ಕೆ ಸಾಕ್ಷಿಯಾಗಲಿದೆ. ಪಾಂಡುರಂಗ ಸ್ವಾಮಿಯ ಕೀರ್ತನೆ ಹಾಗೂ ಭಜನೆಗೆ ಜನಪ್ರಿಯವಾಗಿರುವ ಬೆಂಗಳೂರು ನಗರದ ವಾರ್ಕರೆ ತಂಡ ಭಜನೆ ಕಾರ್ಯಕ್ರಮ ನಡೆಸಿ ಕೊಡಲಿದೆ’ ಎಂದು ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮುದಾಯದ ಮುಖಂಡ ನಂಜುಂಡ್ ರಾವ್ ಪಿಸ್ಸೆ ಮಾತನಾಡಿ, ‘ಮಹೋತ್ಸವಕ್ಕೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿರುವ ಸಮುದಾಯದವರನ್ನು ಆಹ್ವಾನಿಸಲಾಗುವುದು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ಎಲ್ಲರೂ ದೇವರ ಕೃಪೆಗೆ ಪಾತ್ರರಾಗಬೇಕು. ಮೊದಲ ಮಹೋತ್ಸವವನ್ನು ಸರಳವಾಗಿ ಆಯೋಜನೆ ಮಾಡುತ್ತಿದ್ದು, ಮುಂದೆ ಅದ್ಧೂರಿಯಾಗಿ ಆಚರಿಸಲಾಗುವುದು’ ಎಂದರು.
ಸಮುದಾಯದ ಉಪಾಧ್ಯಕ್ಷ ಕಿರಣ್ ರಾವ್ ಬಾಂಬೊರೆ, ‘ಕಲ್ಯಾಣ ಮಂಪಟದಲ್ಲಿ ಮಧ್ಯಾಹ್ನದ ತನಕ ಧಾರ್ಮಿಕ ಕೈಂಕರ್ಯಗಳು ಜರುಗಲಿದೆ. ನಂತರ ಪಾಂಡುರಂಗ ಸ್ವಾಮಿಯ ಮೂರ್ತಿಯನ್ನು ಬೆಳ್ಳಿರಥಲ್ಲಿಟ್ಟು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಮಹೋತ್ಸವದಲ್ಲಿ ಪಾಲ್ಗೊಳ್ಳುವವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಇರಲಿದೆ’ ಎಂದು ಹೇಳಿದರು.
ಸಮುದಾಯದ ಮಾಜಿ ಅಧ್ಯಕ್ಷ ನಾಗರಾಜ್ ರಾವ್ ಬಾಂಬೊರೆ, ನಿಕಟಪೂರ್ವ ಅಧ್ಯಕ್ಷ ಉಮೇಶ್ ರಾವ್ ಜಿಂಗಾಡೆ, ಖಜಾಂಚಿ ಮಧು ರಾವ್ ಬಾಂಬೊರೆ, ಮುಖಂಡರಾದ ನರಸೋಜಿರಾವ್ ಜಿಂಗಾಡೆ, ರೇಖಾಕುಮಾರ್ ಬಾಯಿ, ಮಹೇಶ್ ರಾವ್, ರಾಜೇಶ್ವರಿ ಬಾಯಿ, ರವಿಕಿರಣ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.