ಮಾಗಡಿ: ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ದೇವಾಲಯದಲ್ಲಿ ಅಳಿವಿನ ಅಂಚಿನಲ್ಲಿ ಇರುವ ಚಿಪ್ಪುಹಂದಿ (ಪ್ಯಾಂಗೊಲಿನ್) ಕಾಣಿಸಿಕೊಂಡಿತ್ತು.ದೇವಾಲಯ ಪೌಳಿಯೊಳಗಿನ ಮಂಟಪದ ಬಾಗಿಲಿನ ಸಂದಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಸಿಬ್ಬಂದಿ ಉಪಾಯದಿಂದ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.
ಪರಿಸರ ಸಮತೋಲನ: ಇರುವೆ ಬಕ ಎಂದು ಕರೆಯಲ್ಪಡುವ ಈ ಪ್ರಾಣಿ ಅಳಿವಿನ ಅಂಚಿನಲ್ಲಿದೆ ಎಂದು ತುಮಕೂರಿನ ವನ್ಯಜೀವಿ ಸಂಸ್ಥೆ ಸಂಸ್ಥಾಪಕ ಬಿ.ವಿ.ಗುಂಡಪ್ಪ ತಿಳಿಸಿದರು.
ಅರೆಮಲೆನಾಡು ಮಾಗಡಿ ಸೀಮೆ ಅಪರೂಪದ ಪ್ರಾಣಿ –ಪಕ್ಷಿಗಳ ತಾಣ. ಕಾಡಾನೆ, ಚಿರತೆ, ಕರಡಿ, ನವಿಲುಗಳ ಆವಾಸ ಸ್ಥಾನವಾಗಿತ್ತು ಎಂದು ಪ್ರವಾಸಿಗ ಕರ್ನಲ್ ಬ್ರಾನ್ ಫಿಲ್ ಪ್ರವಾಸಿ ಕಥನದಲ್ಲಿ ದಾಖಲಿಸಿದ್ದಾನೆ.
ಪ್ಯಾಂಗೊಲಿನ್ ಮೈಮೇಲಿನ ಮುಳ್ಳಿನಂತಹ ಚರ್ಮ ಆತ್ಮರಕ್ಷಣೆಗೆ ಸಹಕಾರಿ. ಮೂತಿ ಚೂಪಾಗಿದ್ದು, ರಾತ್ರಿ ಸಂಚಾರಿ. ಇರುವೆ , ಗೊದ್ದ, ಗೆದ್ದಲು ಇದರ ಆಹಾರ ಪದ್ಧತಿ.ಇರುವ ಗೂಡಿಗೆ ಚೂಪಾದ ಮೂತಿಯನ್ನಿಟ್ಟು ಜೋರಾಗಿ ಉಸಿರು ಎಳೆದುಕೊಂಡು ಇರುವೆಗಳನ್ನು ಬಕ್ಷಿಸುತ್ತದೆ. ಗೆದ್ದಲು ಹುತ್ತದ ಒಳಗೆ ನುಸುಳಿ ಗೆದ್ದಲು ಸಾಮ್ರಾಜ್ಯ ನಾಶ ಮಾಡುತ್ತದೆ. ಅಂಟು ನಾಲಿಗೆಯಿಂದ ಇರುವೆ, ಗೆದ್ದಲು, ಗೊದ್ದಗಳನ್ನು ಸುಲಭವಾಗಿ ತಿನ್ನುತ್ತದೆ.
ಅಂತರರಾಷ್ಟ್ರೀಯ ಪರಿಸರ ಸಂಸ್ಥೆ ಪ್ಯಾಂಗೊಲಿನ್ ಕೆಂಪು ಪಟ್ಟಿಗೆ ಸೇರಿಸಿದ್ದು, ಸಂರಕ್ಷಣೆಗೆ ಒತ್ತುನೀಡಿದೆ. ಪ್ರಾಣಕ್ಕೆ ಅಪಾಯ ಬಂದಾಗ ರಕ್ಷಣೆ ಪಡೆಯಲು ದೇಹವನ್ನು ಮುದುಡಿಕೊಂಡು ವಾಲಿಬಾಲ್ ಚೆಂಡಿನಂತಾಗುತ್ತದೆ ಎಂದು ಇದರ ವೈಶಿಷ್ಟವನ್ನು ಗುಂಡಪ್ಪ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.