ADVERTISEMENT

ಜನವಸತಿ ಪ್ರದೇಶದಲ್ಲಿ ಪಾರ್ಟಿ ಹಾಲ್

ಪೌರಾಯಕ್ತರಿಗೆ ನಾಗರಿಕರ ದೂರು ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 8 ಮೇ 2022, 4:12 IST
Last Updated 8 ಮೇ 2022, 4:12 IST

ಚನ್ನಪಟ್ಟಣ: ಇಲ್ಲಿನ ಕನಕ ನಗರದ 4ನೇ ಅಡ್ಡರಸ್ತೆಯ ಜನವಸತಿ ಪ್ರದೇಶದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಅಕ್ರಮವಾಗಿ ಪಾರ್ಟಿ ಹಾಲ್ ನಡೆಸುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ನಗರಸಭೆ ಪೌರಾಯುಕ್ತರಿಗೆ ದೂರು ನೀಡಿದ್ದಾರೆ.

ನಗರಸಭೆಯಿಂದ ಅನುಮತಿ ಪಡೆಯದೆ ಕಳೆದ ನಾಲ್ಕು ತಿಂಗಳಿನಿಂದ ಅಕ್ರಮವಾಗಿ ಪಾರ್ಟಿ ಹಾಲ್ ನಿರ್ಮಾಣ ಮಾಡಿಕೊಂಡಿದ್ದಾರೆ. ಇಲ್ಲಿ ಬೀಗರ ಔತಣಕೂಟ, ಹುಟ್ಟುಹಬ್ಬದ ಸಮಾರಂಭ ಸೇರಿದಂತೆ ಇತರೆ ಕಾರ್ಯಕ್ರಮಗಳು ನಡೆಯುತ್ತಿವೆ. ಇದರಿಂದ ಸುತ್ತಮುತ್ತ ಇರುವ ನಿವಾಸಿಗಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಮಾಂಸಾಹಾರ ಊಟವಿರುವ ಕಾರ್ಯಕ್ರಮಗಳಿಗೆ ಬರುವವರು ಮದ್ಯ ಸೇವಿಸಿ ಬರುತ್ತಿದ್ದು, ಇದರಿಂದ ಈ ಬಡಾವಣೆಯ ಮಹಿಳೆಯರು ಮತ್ತು ಮಕ್ಕಳು ಮುಜುಗರ ಅನುಭವಿಸುವಂತಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಹಾಗೆಯೇ ಪಾರ್ಟಿ ಹಾಲ್‌ನಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಲಿನ್ಯ ಉಂಟಾಗುತ್ತಿದೆ. ಕಾರ್ಯಕ್ರಮಗಳು ನಡೆದಾಗ ಊಟದ ಎಲೆಗಳು ಹಾಗೂ ಇನ್ನಿತರ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ ಎಲ್ಲೆಂದರಲ್ಲಿ ಬಿಸಾಡುವುದರಿಂದ ಈ ಜಾಗ ಗಬ್ಬೆದ್ದು ನಾರುತ್ತಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶ ಕಲುಷಿತಗೊಂಡಿದೆ. ಸಾಂಕ್ರಾಮಿಕ ರೋಗ ಹಬ್ಬುವ ಭೀತಿ ಎದುರಾಗಿದೆ. ಪಾರ್ಟಿ ಹಾಲ್‌ಗೆ ಬಳಿ ಪಾರ್ಕಿಂಗ್ ಜಾಗ ಇಲ್ಲದ ಕಾರಣ ವಾಹನವನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸುತ್ತಿದ್ದು, ಇತರೆ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

ಅಕ್ರಮವಾಗಿ ನಿರ್ಮಾಣ ಮಾಡಿರುವ ಪಾರ್ಟಿ ಹಾಲ್ ಅನ್ನು ಮುಚ್ಚಿಸಬೇಕು. ಇಲ್ಲಿಯ ನಿವಾಸಿಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳಾದ ಕನಕಪ್ಪ, ವೆಂಕಟೇಶ್, ಉಮೇಶ್, ದೇವರಾಜು, ಮುರುಗೇಶ್, ಸತೀಶ್, ಸುರೇಶ್ ದೂರಿನಲ್ಲಿ ಮನವಿ ಮಾಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಗರಸಭೆ ಪೌರಾಯುಕ್ತ ಶಿವನಂಕಾರಿಗೌಡ, ‘ಪಾರ್ಟಿ ಹಾಲ್ ನಡೆಸಲು ಅನುಮತಿ ಪಡೆದಿದ್ದಾರೆಯೇ ಎಂಬ ಬಗ್ಗೆ ದಾಖಲೆಗಳನ್ನು ಪರಿಶೀಲಿಸಲಾಗುವುದು. ಅನುಮತಿ ಪಡೆದಿಲ್ಲದಿದ್ದರೆ ನೋಟಿಸ್ ಜಾರಿ ಮಾಡಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.