ADVERTISEMENT

ರಾಮನಗರ | ಪಿಡಿಒ ಅಮಾನತು ಆದೇಶ ವಜಾ: ಡಿಸಿ ನಡೆ ವಿರುದ್ಧ ಮೈತ್ರಿ ಪಕ್ಷದ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 2:25 IST
Last Updated 22 ನವೆಂಬರ್ 2025, 2:25 IST
ಕನಕಪುರ ಗಣೇಶ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು 
ಕನಕಪುರ ಗಣೇಶ ದೇವಸ್ಥಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು    

ಕನಕಪುರ: ಶಿಷ್ಟಾಚಾರ ಉಲ್ಲಂಘನೆ ಆರೋಪದಡಿ ಅಮಾನತುಗೊಂಡಿದ್ದ ಪಿಡಿಒ ಅವರ ಅಮಾನತು ವಜಾಗೊಳಿಸಿರುವ ಜಿಲ್ಲಾಧಿಕಾರಿಗಳ ನಡೆಯನ್ನು ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ತೀವ್ರ ಖಂಡಿಸಿದ್ದಾರೆ.

ನಗರದ ಕೋಟೆ ಗಣೇಶನ ದೇವಸ್ಥಾನದಲ್ಲಿ ಮೈತ್ರಿ ಪಕ್ಷದವರು ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ.ನಾಗರಾಜು, ಬಿಜೆಪಿ ನಗರ ಘಟಕದ ಅಧ್ಯಕ್ಷ ಮಂಜುನಾಥ್, ದಿಶಾ ಕಮಿಟಿ ಸದಸ್ಯೆ ಶೋಭಾ, ಸ್ಟುಡಿಯೋ ಚಂದ್ರು, ಜೈರಾಮೇಗೌಡ,  ಚಿನ್ನಸ್ವಾಮಿ ಮಾತನಾಡಿ, ಜಿಲ್ಲಾಧಿಕಾರಿಗಳು ಪಿಡಿಒ ಶ್ರೀನಿವಾಸ್ ಅವರ ಅಮಾನತು ಆದೇಶ ಹಿಂಪಡೆದು ಅವರನ್ನು ಟಿ.ಬೇಕುಪ್ಪೆ ಪಂಚಾಯಿತಿಗೆ ನಿಯೋಜಿಸಿರುವುದು ಖಂಡನೀಯ ಎಂದರು.

ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆಯಲ್ಲಿ ಕಟ್ಟಡದ ಮೇಲೆ ಭಾವಚಿತ್ರ ಅಳವಡಿಕೆ ಮತ್ತು ಆಹ್ವಾನ ಪತ್ರಿಕೆ ಮುದ್ರಣದಲ್ಲಾಗಿರುವ ಶಿಷ್ಟಾಚಾರ ಉಲ್ಲಂಘನೆಗೆ ಇಒ ಅವರ ವರದಿ ಮೇರೆಗೆ ಟಿ.ಬೇಕುಪ್ಪೆ ಗ್ರಾಮ ಪಂಚಾಯಿತಿ ಪಿಡಿಒ ಶ್ರೀನಿವಾಸ್ ಅವರನ್ನು ಅಮಾನತುಗೊಳಿಸಿದ್ದರು. ಆದರೆ ಈಗ ಜಿಲ್ಲಾಧಿಕಾರಿಗಳು ಯಾರದೋ ಒತ್ತಡಕ್ಕೆ ಮಣಿದು ಅಮಾನತು ಆದೇಶ ಹಿಂಪಡೆದಿದ್ದಾರೆ. ಇಲ್ಲಿ ಪಿಡಿಒ ತಪ್ಪು ಮಾಡದಿದ್ದರೆ, ತಪ್ಪು ವರದಿ ನೀಡಿರುವ ಇಒ ಅವರನ್ನು ಜಿಲ್ಲಾಧಿಕಾರಿ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಅಧಿಕಾರಿಗಳು ಯಾರದೋ ಒತ್ತಡಕ್ಕೆ ಮಣಿದು, ಅವರಿಗೆ ಬೇಕಾದ ರೀತಿ ಕೆಲಸ ಮಾಡುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಸಾರ್ವಜನಿಕರ ಕೆಲಸ ಮಾಡಬೇಕು. ಇಲ್ಲದಿದ್ದರೆ ಮೈತ್ರಿ ಪಕ್ಷವ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಉಮಾಶಂಕರ್, ಕಾಳೇಗೌಡ, ಯೂನೆಸ್ ಅಲಿಖಾನ್, ತಿಮ್ಮೇಗೌಡ, ಮಂಜುನಾಥ್, ಚಂದ್ರಕಲಾ, ಶ್ರೀನಿವಾಸ್ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.