ADVERTISEMENT

ಬಿಡದಿ: ಮಾಂಸ ಖರೀದಿಗೆ ಮುಗಿಬಿದ್ದ ಜನತೆ

​ಪ್ರಜಾವಾಣಿ ವಾರ್ತೆ
Published 3 ಮೇ 2021, 4:08 IST
Last Updated 3 ಮೇ 2021, 4:08 IST
ಕರ್ಫ್ಯೂ ಜಾರಿಯಲ್ಲಿದ್ದರೂ ಮನಬಂದಂತೆ ತಿರುಗಾಡುತ್ತಿರುವ ನಾಗರಿಕರು
ಕರ್ಫ್ಯೂ ಜಾರಿಯಲ್ಲಿದ್ದರೂ ಮನಬಂದಂತೆ ತಿರುಗಾಡುತ್ತಿರುವ ನಾಗರಿಕರು   

ಬಿಡದಿ: ಕೋವಿಡ್‌ ಎರಡನೇ ಅಲೆಯ ಅಬ್ಬರದ ನಡುವೆ ಜನರ ಸಂಚಾರಕ್ಕೆ ಕಡಿವಾಣ ಹಾಕಲು ಸ್ಥಳೀಯ ಆಡಳಿತ ಮತ್ತು ಪೊಲೀಸ್‌ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.

ಕಠಿಣ ಕ್ರಮಕೈಗೊಂಡರೂ ಪಟ್ಟಣದಲ್ಲಿ ಜನತೆ ಎಚ್ಚೆತ್ತುಕೊಂಡಿಲ್ಲ. ಸೋಂಕಿನ ಸರಪಳಿ ತುಂಡರಿಸಲು ರಾಜ್ಯ ಸರ್ಕಾರ ವಿಧಿಸಿರುವ ನಿಯಮವನ್ನು ಉಲ್ಲಂಘಿಸಿ ಮನಬಂದಂತೆ ತಿರುಗಾಡುತ್ತಿದ್ದಾರೆ. ಇದು ಜಿಲ್ಲಾಡಳಿತ ಮತ್ತು ಪೊಲೀಸರಿಗೆ ತಲೆನೋವು ತಂದಿದೆ.

ಭಾನುವಾರ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಓಡಾಟಕ್ಕೆ ಯಾವುದೇ ನಿರ್ಬಂಧವಿಲ್ಲ ಎನ್ನುವಮಟ್ಟಿಗೆ ರಸ್ತೆ ಗಳಲ್ಲಿ ಜನಜಂಗುಳಿ ಕಂಡು ಬಂದಿತು. ತರಕಾರಿ, ಕೋಳಿ, ಕುರಿ, ಮೇಕೆ ಮಾಂಸ ಖರೀದಿಗೆ ಮುಗಿಬಿದ್ದಿದ್ದರು. ಸಾಮಾಜಿಕ ಅಂತರ ಮರೆತಿ ದ್ದರು. ಕೆಲವರು ಮಾಸ್ಕ್ ಇಲ್ಲದೇ ಸಂಚರಿಸಿದರು.

ADVERTISEMENT

ಈ ಬಗ್ಗೆ ಪೊಲೀಸರು ಪ್ರಶ್ನಿಸಿದರೆ, ಅಗತ್ಯ ವಸ್ತುಗಳನ್ನು ಖರೀದಿಸಲು ಬಂದಿದ್ದೇವೆ ಎಂಬ ನೆಪ ಹೇಳುತ್ತಿದ್ದರು. ಮಧ್ಯಾಹ್ನ 12ಗಂಟೆವರೆಗೂ ಸರ್ಕಾರ ದಿನಸಿ ಸೇರಿದಂತೆ ಅಗತ್ಯವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿದೆ. ಕೆಲವು ವ್ಯಾಪಾರಿಗಳು ಈ ಅವಧಿ ಮೀರಿಯೂ ತೆರೆಮರೆಯಲ್ಲಿ ವ್ಯಾಪಾರಕ್ಕೆ ಮುಂದಾಗಿದ್ದರು. ಕೊನೆಗೆ ಎಚ್ಚೆತ್ತುಕೊಂಡ ಪೊಲೀಸರು ರಸ್ತೆಗಿಳಿಯುವಷ್ಟರಲ್ಲಿ ಅಂಗಡಿ ಮುಚ್ಚಿದರು.

‘ಅಗತ್ಯ ವಸ್ತುಗಳ ಖರೀದಿಗೆ ಕಡಿಮೆ ಸಮಯ ನೀಡಲಾಗಿದೆ. ಹಾಗಾಗಿ, ಖರೀದಿಗೆ ಜನರು ದಾಂಗುಡಿ ಇಡುತ್ತಿದ್ದಾರೆ. ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದುಪುರಸಭೆ ಸದಸ್ಯ ಟಿ. ಕುಮಾರ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.