ADVERTISEMENT

ಉತ್ತಮ ಫಲಿತಾಂಶಕ್ಕೆ ಪರಿಶ್ರಮ ಅಗತ್ಯ: ಜೆ.ಎಂ. ಜಯಲಕ್ಷ್ಮಿ

ಮಕ್ಕಳ ಪೋಷಕರ ಸಭೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 3:01 IST
Last Updated 2 ಫೆಬ್ರುವರಿ 2022, 3:01 IST
ಕನಕಪುರದ ಆರ್‌ಜಿಎಚ್‌ಎಸ್ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಬಿಇಒ ಜೆ.ಎಂ. ಜಯಲಕ್ಷ್ಮಿ ಮಾತನಾಡಿದರು. ಕೆ.ಬಿ. ನಾಗರಾಜು, ರಾಮಚಂದ್ರ ಅಡ್ಮನಿ ಉಪಸ್ಥಿತರಿದ್ದರು
ಕನಕಪುರದ ಆರ್‌ಜಿಎಚ್‌ಎಸ್ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಬಿಇಒ ಜೆ.ಎಂ. ಜಯಲಕ್ಷ್ಮಿ ಮಾತನಾಡಿದರು. ಕೆ.ಬಿ. ನಾಗರಾಜು, ರಾಮಚಂದ್ರ ಅಡ್ಮನಿ ಉಪಸ್ಥಿತರಿದ್ದರು   

ಕನಕಪುರ: ‘ಶೈಕ್ಷಣಿಕ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟವಾಗಿದೆ. ಮಕ್ಕಳು ಕಠಿಣ ಪರಿಶ್ರಮದೊಂದಿಗೆ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆಯಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಜಯಲಕ್ಷ್ಮಿ ತಿಳಿಸಿದರು.

ಇಲ್ಲಿನ ಆರ್‌ಇಎಸ್‌ನ‍ ಆರ್‌ಜಿಎಚ್‌ಎಸ್‌ ಪ್ರೌಢಶಾಲೆಯಲ್ಲಿ ಎಸ್‌ಎಸ್‌‌ಎಲ್‌ಸಿ ಉತ್ತಮ ಫಲಿತಾಂಶಕ್ಕಾಗಿ ಮಂಗಳವಾರ ನಡೆದ ಮಕ್ಕಳ ಪೋಷಕರ ಸಭೆಯಲ್ಲಿ ಅವರು ಮಾತನಾಡಿದರು.

ಕೋವಿಡ್‌ ಕಾರಣದಿಂದ ಎರಡು ವರ್ಷದಿಂದ ಶಾಲಾ, ಕಾಲೇಜುಗಳು ಸರಿಯಾಗಿ ನಡೆದಿಲ್ಲ. ಬಹುತೇಕ ತರಗತಿಗಳು ಆನ್‌ಲೈನ್‌ನಲ್ಲೇ ನಡೆದಿವೆ. ಕಳೆದ ವರ್ಷ ಪರೀಕ್ಷೆಯನ್ನು ಅತ್ಯಂತ ಸರಳೀಕರಿಸಿ ನಡೆಸಲಾಯಿತು. ಈ ವರ್ಷ ಹಳೆಯ ಪದ್ಧತಿಯಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಿದ್ದು, ಮಕ್ಕಳು ಈಗಿನಿಂದಲೇ ಅದಕ್ಕೆ ಸಿದ್ಧರಾಗಬೇಕು ಎಂದು ಹೇಳಿದರು.

ADVERTISEMENT

ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರ ಹೆಚ್ಚಿದೆ. ಮಕ್ಕಳು ಆಟೋಟದ ಜತೆಗೆ ಓದಿಗೂ ಹೆಚ್ಚು ಸಮಯ ನೀಡಬೇಕು. ಶ್ರದ್ಧೆಯಿಂದ ಓದಿನ ಕಡೆ ಗಮನ ಹರಿಸಬೇಕು. ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟ ಪಾಠ ಮತ್ತು ಹೋಂ ವರ್ಕ್‌ ಅನ್ನು ಮನೆಯಲ್ಲಿ ಮಾಡುವಂತೆ ಪೋಷಕರು ನೋಡಿಕೊಳ್ಳಬೇಕು. ಮಕ್ಕಳ ಪ್ರಗತಿ ಕಡೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.

ಉತ್ತಮ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಸೇರಿ ಕೆಲಸ ಮಾಡಬೇಕು. ಮಕ್ಕಳಿಗೆ ತಿಳಿಯದ ವಿಷಯವಿದ್ದರೆ ಅದನ್ನು ಶಿಕ್ಷಕರು ತಿಳಿಸಿಕೊಡಬೇಕು. ಯಾವ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿರುತ್ತಾರೋ ಅಂತಹವರನ್ನು ಗುರುತಿಸಿ ಅವರನ್ನು ಉತ್ತೇಜಿಸಬೇಕು. ಅವರಲ್ಲಿನ ಗೊಂದಲ ನಿವಾರಣೆ ಮಾಡಿ ಕಲಿಕೆಯತ್ತ ಆಸಕ್ತಿ ಮೂಡಿಸಬೇಕು ಎಂದು ಹೇಳಿದರು.

ಆರ್‌ಇಎಸ್‌ ಅಧ್ಯಕ್ಷ ಕೆ.ಬಿ. ನಾಗರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಆರ್‌ಜಿಎಚ್‌ಎಸ್‌ ಪ್ರೌಢಶಾಲೆಯ ಮುಖ್ಯಶಿಕ್ಷಕ ರಾಮಚಂದ್ರ ಅಡ್ಮನಿ, ಪಿಯು ಕಾಲೇಜಿನ ಪ್ರಾಂಶುಪಾಲ ಗದಿಗಪ್ಪ ಹಿತ್ತಲಮನಿ, ಸಿಇಒ ರುದ್ರಮುನಿ, ಶಿಕ್ಷಕರಾದ ಮಧುಸೂದನ್‌, ಸಿದ್ದೇಶ್‌, ಎಂ.ಎನ್‌. ಶ್ರೀಧರ್‌, ಕೃಷ್ಣವೇಣಿ, ಇಂದುಮತಿ, ದಿವ್ಯಾ, ಮಮತಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.