ADVERTISEMENT

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 6:01 IST
Last Updated 5 ಆಗಸ್ಟ್ 2025, 6:01 IST
ಚನ್ನಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರು ಮಾತನಾಡಿದರು
ಚನ್ನಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರು ಮಾತನಾಡಿದರು   

ಚನ್ನಪಟ್ಟಣ: ನಗರದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ಜಿ.ಎಚ್.ನಾಗರಾಜು ಅವರು ಅಧಿಕಾರ ಹಂಚಿಕೆ ಒಪ್ಪಂದದಂತೆ ಈ ಕೂಡಲೇ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಜೆಡಿಎಸ್ ಬೆಂಬಲಿತ ಬ್ಯಾಂಕ್ ನಿರ್ದೇಶಕರು ಒತ್ತಾಯಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರು ರಾಜೀನಾಮೆ ನೀಡದಿದ್ದರೆ ಅಧ್ಯಕ್ಷರ ವಿರುದ್ಧ ಹೋರಾಟದ ಜೊತೆಗೆ ಅವಿಶ್ವಾಸ ತರಲಾಗುವುದು ಎಂದು ನಿರ್ದೇಶಕರಾದ ಇಗ್ಗಲೂರು ಡಿಎಂಕೆ ಕುಮಾರ್, ಮಾಗನೂರು ಡಿ.ಗಂಗರಾಜು, ಬೈರನರಸಿಂಹಯ್ಯ, ಗರಕಹಳ್ಳಿ ಸಿದ್ದರಾಜು, ಬಿ.ವಿ. ಮೋಹನ್ ಹಾಗೂ ಇತರರು ಎಚ್ಚರಿಕೆ ನೀಡಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ 5 ಮಂದಿ ಆಕಾಂಕ್ಷಿಗಳಿದ್ದರು. ಪಕ್ಷದ ವರಿಷ್ಠರ ತೀರ್ಮಾನದಂತೆ ತಲಾ ಐದು ಮಂದಿಗೂ ಒಬ್ಬೊಬ್ಬರಿಗೆ ಒಂದು ವರ್ಷ ಅಧಿಕಾರ ಹಂಚಿಕೆ ಮಾಡಲಾಗಿತ್ತು. ಪ್ರಥಮವಾಗಿ ಅಧ್ಯಕ್ಷರಾಗಿ ಗೋವಿಂದಹಳ್ಳಿ ನಾಗರಾಜು ಮತ್ತು ಉಪಾಧ್ಯಕ್ಷರಾಗಿ ಪ್ರಮೀಳಾ ವೆಂಕಟೇಶ್ ಅವರಿಗೆ ಅವಕಾಶ ಮಾಡಿಕೊಡಲಾಗಿತ್ತು.

ADVERTISEMENT

ಈ ತೀರ್ಮಾನಕ್ಕೆ ಎಲ್ಲರೂ ಒಪ್ಪಿದ್ದರು. ಆದರೆ, ಅವಧಿ ಮೀರಿ ಎರಡು ವರ್ಷ ಕಳೆದರೂ, ಅಧ್ಯಕ್ಷರು, ಯಾವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪ್ರತ್ಯೇಕ ಸಭೆ ಮಾಡಿಲ್ಲ. ಚರ್ಚೆ ನಡೆಸಿಲ್ಲ. ಒಪ್ಪಂದದಂತೆ ರಾಜೀನಾಮೆ ಕೊಟ್ಟು ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ವರಿಷ್ಠರಾದ ಎಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಲೂ ಸೂಚಿಸಿದ್ದರೂ ನಾಗರಾಜು ಅವರು ಸ್ಪಂದಿಸದೆ ವರಿಷ್ಠರ ಮಾತನ್ನು ಧಿಕ್ಕರಿಸಿದ್ದಾರೆ ಎಂದು ಆರೋಪಿಸಿದರು.

ಪಕ್ಷದ ವರಿಷ್ಠರ ಆದೇಶದಂತೆ ಗೋವಿಂದಹಳ್ಳಿ ನಾಗರಾಜು ಅವರು ಅಧ್ಯಕ್ಷ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ಕೊಟ್ಟು ಬೇರೆಯವರಿಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ನಮ್ಮಲ್ಲಿ ಕೋರಂ ಇದ್ದು ಜೆಡಿಎಸ್ ಬೆಂಬಲಿತ ನಿರ್ದೇಶಕರು, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಚರ್ಚಿಸಿ, ಅಧ್ಯಕ್ಷರ ವಿರುದ್ಧ ಅವಿಶ್ವಾಸ ತರಲಾಗುವುದು. ಮುಂದಿನ ಹೋರಾಟಕ್ಕೂ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

ಎಂ.ವಿ. ವೆಂಕಟೇಶ್, ಸಿದ್ದಪ್ಪ, ಇ.ತಿ.ಶ್ರೀನಿವಾಸ್, ರೇಖಾ ಉಮಾಶಂಕರ್, ಎಲೇಕೇರಿ ನಂದೀಶ್, ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.