ADVERTISEMENT

ಕನಕಪುರ | ಜೀವ ಬೆದರಿಕೆ ದೂರು: ಹತ್ತು ಮಂದಿ ವಿರುದ್ಧ ಪ್ರಕರಣ

ನಂಜೇಶ್‌ ಕೊಲೆಗೆ ದ್ವೇಷ: ಮನೆ ಧ್ವಂಸ,ಬೆಳೆ ನಾಶದ ಆರೋಪ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 2:15 IST
Last Updated 2 ಸೆಪ್ಟೆಂಬರ್ 2025, 2:15 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಕನಕಪುರ: ಈಚೆಗೆ ಕೊಲೆಯಾದ ಹೊಂಗಾಣಿದೊಡ್ಡಿ ಗ್ರಾಮದ ಕಾಂಗ್ರೆಸ್ ಮುಖಂಡ ನಂಜೇಶ್ ಇಬ್ಬರು ಸಹೋದರಿಯರು ಸೇರಿದಂತೆ ಕುಟುಂಬದ ಒಟ್ಟು ಹತ್ತು ಸದಸ್ಯರ ವಿರುದ್ಧ ಸಾತನೂರು ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ. 

ADVERTISEMENT

ಕೊಲೆ ಆರೋಪಿಗಳಿಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ನಂಜೇಶ್ ಸಹೋದರಿ ಲಕ್ಷ್ಮಿ, ಪ್ರಮೀಳಾ ಹಾಗೂ ಕುಟುಂಬ ಸದಸ್ಯರಾದ ಬಸವಲಿಂಗ, ಚಂದನ್, ಶಿವು, ಸಾಕಮ್ಮ ಜಯರತ್ನಮ್ಮ, ಹೇಮಂತ್, ಮಹೇಶ್, ಚೇತನ್ ವಿರುದ್ಧ ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

‘ನಂಜೇಶ್‌ ಕೊಲೆ ನಂತರ ಅವರ ಕುಟುಂಬದವರು ನಮ್ಮ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ. ನಮ್ಮ ಮನೆಗಳನ್ನು ಧ್ವಂಸ ಮಾಡಿದ್ದು,  ಬೆಳೆಗಳನ್ನು ನಾಶಪಡಿಸುತ್ತಿದ್ದಾರೆ’ ಎಂದು ಕೊಲೆ ಆರೋಪದಲ್ಲಿ ಜೈಲು ಸೇರಿರುವ ಮುನಿಸಿದ್ದೆಗೌಡರ ಪತ್ನಿ ಸುಕನ್ಯ ಸಾತನೂರು ಠಾಣೆಗೆ ದೂರು ನೀಡಿದ್ದರು.

‘ನಂಜೇಶ್ ಕೊಲೆಗೂ ನನ್ನ ಪತಿ ಮುನಿಸಿದ್ದೇಗೌಡರಿಗೂ ಯಾವುದೇ ಸಂಬಂಧವಿಲ್ಲ. ನಂಜೇಶ್‌ ಕೊಲೆ ಆರೋಪಿಗೆ ನನ್ನ ಪತಿ ಬೆಂಬಲ ನೀಡಿದ್ದಾರೆ ಎಂದು ನಂಜೇಶ್ ಕುಟುಂಬ ಸದಸ್ಯರು ತಪ್ಪು ತಿಳಿದು ದ್ವೇಷ ಸಾದಿಸುತ್ತಿದ್ದಾರೆ. ಹಲ್ಲೆಗೆ ಯತ್ನ ನಡೆಸಿದ್ದು, ಜೀವ ಬೆದರಿಕೆ ಒಡ್ಡಿದ್ದಾರೆ. ಹೀಗಾಗಿ ನಾವು ಗ್ರಾಮ ತೊರೆದಿದ್ದೇವೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

‘ನಮಗೆ ಜೀವ ಭಯವಿದ್ದು, ನಂಜೇಶ್ ಕುಟುಂಬದ ಸದಸ್ಯರ ವಿರುದ್ಧ ಕಾನೂನು ಕ್ರಮ ಕೈಗೊಂಡು, ನಮಗೆ ರಕ್ಷಣೆ ನೀಡಬೇಕು’ ಎಂದು ಅವರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.