ADVERTISEMENT

ಮೇಕೆದಾಟು ಪಾದಯಾತ್ರೆ ಮುಂದೂಡಿಕೆ

ಸಚಿವ ಸಂಪುಟ ರಚನೆ ಬಳಿಕ ಹೋರಾಟಕ್ಕೆ ರೈತ ಸಂಘ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 3:48 IST
Last Updated 1 ಆಗಸ್ಟ್ 2021, 3:48 IST
ಸುದ್ದಿಗೋಷ್ಠಿಯಲ್ಲಿ ಅರಳಾಪುರ ಮಂಜೇಗೌಡ ಮಾತನಾಡಿದರು. ಸಂಪತ್‌ಕುಮಾರ್, ಮಂಜುನಾಥ್‌, ಮಹದೇವ ಸಾಗರ್‌, ಪಂಕಜಾ ಇದ್ದರು
ಸುದ್ದಿಗೋಷ್ಠಿಯಲ್ಲಿ ಅರಳಾಪುರ ಮಂಜೇಗೌಡ ಮಾತನಾಡಿದರು. ಸಂಪತ್‌ಕುಮಾರ್, ಮಂಜುನಾಥ್‌, ಮಹದೇವ ಸಾಗರ್‌, ಪಂಕಜಾ ಇದ್ದರು   

ರಾಮನಗರ: ರಾಜ್ಯದಲ್ಲಿನ ರಾಜಕೀಯ ಅಸ್ಥಿರತೆ ಕಾರಣಕ್ಕೆ ಆ. 3ರಂದು ಮೇಕೆದಾಟಿನಿಂದ ಬೆಂಗಳೂರಿನವರೆಗೆ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆಯನ್ನು ಮುಂದೂಡಿದ್ದೇವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಅರಳಾಪುರ ಮಂಜೇಗೌಡ ತಿಳಿಸಿದರು.

‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಿದ್ದು, ಸಚಿವ ಸಂಪುಟ ಅಸ್ತಿತ್ವದಲ್ಲಿ ಇಲ್ಲ. ಇಲಾಖೆಗಳಲ್ಲಿ ಸಚಿವರೇ ಇಲ್ಲದ ಕಾರಣ ಪಾದಯಾತ್ರೆ ಹಮ್ಮಿಕೊಂಡರೂ ಪ್ರಯೋಜನ ಆಗದು. ಹೀಗಾಗಿ, ಈ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ನೂತನ ಸಚಿವ ಸಂಪುಟ ಆಯ್ಕೆ ದಿನದಂದೇ ಮೇಕೆದಾಟಿನಿಂದ ವಿಧಾನಸೌಧದ ತನಕ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತದೆ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಮಲೈ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಸಲುವಾಗಿಯೇ ಮೇಕೆದಾಟು ವಿಚಾರದಲ್ಲಿ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವ ಕೆಲಸವಲ್ಲ. ರಾಜ್ಯದಲ್ಲಿಯೇ ಕೆಲಸ ಮಾಡಿದ್ದ ಅಧಿಕಾರಿಗೆ ಈ ಕುರಿತು ಮಾಹಿತಿ ಇರಬೇಕು ಎಂದು ಹೇಳಿದರು.

ADVERTISEMENT

ಸರ್ಕಾರ ಮೇಕೆದಾಟು ಅಣೆಕಟ್ಟೆ ಕಟ್ಟಲು ಮುಂದಾಗಬೇಕು. ರೈತ ಸಂಘ, ಕನ್ನಡಪರ ಹೋರಾಟಗಾರರು ಹಾಗೂ ಪಕ್ಷಾತೀತವಾಗಿ ಎಲ್ಲರೂ ಪಾದಯಾತ್ರೆ ಬೆಂಬಲಿಸಬೇಕು ಎಂದು ಕೋರಿದರು.

ಮೇಕೆದಾಟು ಹೋರಾಟ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಮಾತನಾಡಿ, ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಇದಕ್ಕೆ ಮುನ್ನುಡಿ ಬರೆಯಲಾಗುತ್ತದೆ ಎಂದರು.

ಸಂಘಟನೆಯ ಪದಾಧಿಕಾರಿಗಳಾದ ನಟಿ ಪಂಕಜಾ, ಡಾ.ಮಂಜುನಾಥ್, ಮಹದೇವ ಸಾಗರ್, ಕೆ. ಮಲ್ಲಯ್ಯ, ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.