ADVERTISEMENT

‘ಪ್ರಜಾವಾಣಿ’ –‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಆಯೋಜನೆ: SSLC ಪ್ರೇರಣಾ ಕಾರ್ಯಾಗಾರ

ಜಿ.ಪಂ, ಶಾಲಾ ಶಿಕ್ಷಣ ಇಲಾಖೆ, ಜ್ಞಾನ ವಿಕಾಸ್ ವಿದ್ಯಾಸಂಘ ಸಹಯೋಗ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 4:30 IST
Last Updated 10 ಫೆಬ್ರುವರಿ 2026, 4:30 IST
   

ರಾಮನಗರ: ವಿದ್ಯಾರ್ಥಿ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಪ್ರಮುಖ ಘಟ್ಟ. ವಿದ್ಯಾರ್ಥಿಯ ಮುಂದಿನ ಶೈಕ್ಷಣಿಕ ಬದುಕಿನ ದಿಕ್ಕು ನಿರ್ಧರಿಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ‘ಪ್ರಜಾವಾಣಿ‘ ಮತ್ತು ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆಯು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಬಿಡದಿಯ ಜ್ಞಾನ ವಿಕಾಸ್ ವಿದ್ಯಾಸಂಘ (ರಿ) ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಮಂಗಳವಾರ ‘ಪ್ರೇರಣಾ ಕಾರ್ಯಾಗಾರ’ ಹಮ್ಮಿಕೊಂಡಿದೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಯುವ ಕಾರ್ಯಾಗಾರವನ್ನು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಉದ್ಘಾಟಿಸಿ ಮಕ್ಕಳಿಗೆ ಸ್ಫೂರ್ತಿ ತುಂಬಲಿದ್ದಾರೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ಮೋಲ್ ಜೈನ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ ಅವರು ಪೇರಣೆಯ ಮಾತುಗಳನ್ನಾಡಲಿದ್ದಾರೆ. ವಿಶೇಷ ಉಪಸ್ಥಿತಿ ವಹಿಸಲಿರುವ ಜ್ಞಾನ ವಿಕಾಸ್ ವಿದ್ಯಾಸಂಘದ ಸಂಸ್ಥಾಪಕ ಅಧ್ಯಕ್ಷ ಸಿ.ಎಂ. ಲಿಂಗಪ್ಪ ಅವರು ಪರೀಕ್ಷೆಗೆ ಶುಭ ಹಾರೈಸಲಿದ್ದಾರೆ.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಸ್. ಸ್ವಾಮಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಅಭಿವೃದ್ಧಿ) ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ವೆಂಕಟೇಶ್, ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸೋಮಲಿಂಗಯ್ಯ ಹಾಗೂ ‘ಪ್ರಜಾವಾಣಿ’–‘ಡೆಕ್ಕನ್ ಹೆರಾಲ್ಡ್’ ಪ್ರಸರಣ ವಿಭಾಗದ ಪ್ರಧಾನ ವ್ಯವಸ್ಥಾಪಕ ಬಿ.ಎ. ರವಿ ಹಾಗೂ ಉಪ ಪ್ರಧಾನ ವ್ಯವಸ್ಥಾಪಕ ಜಗನ್ನಾಥ ಜೋಯಿಸ್ ಭಾಗವಹಿಸಲಿದ್ದಾರೆ.

ADVERTISEMENT

ತಜ್ಞರಿಂದ ವಿಶೇಷ ಉಪನ್ಯಾಸ ಬೆಳಿಗ್ಗೆ 11 ಗಂಟೆಗೆ

‘ಪರೀಕ್ಷೆಗೆ ಮಾನಸಿಕ ಸಿದ್ಥತೆ ಹಾಗೂ ವ್ಯಕ್ತಿತ್ವ ವಿಕಸನ’ ವಿಷಯ ಕುರಿತು ಜನಪ್ರಿಯ ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ ಹೈಕೋರ್ಟ್ ವಕೀಲರಾದ ಸುರೇಶ್ ಗೌಡ ಅವರು ಮಾತನಾಡಲಿದ್ದಾರೆ. ಮಧ್ಯಾಹ್ನ 12ಕ್ಕೆ ‘ಓದಿದ್ದನ್ನು ಸುಲಭವಾಗಿ ನೆನಪಿಟ್ಟುಕೊಳ್ಳುವ ತಂತ್ರಗಳು ಹಾಗೂ ಜೀವನ ಕೌಶಲ’ ವಿಷಯ ಕುರಿತು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ (ಡಯಟ್) ಉಪನ್ಯಾಸಕ ಬಾಬು ಕೆ.ಪಿ ಅವರು ಮಾಹಿತಿಗಳನ್ನು ನೀಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ನಡೆಯುವ ವಿಷಯವಾರು ಉಪನ್ಯಾಸದಲ್ಲಿ ಗಣಿತ ಶಿಕ್ಷಕ ಎಲ್.ಸಿ. ಮಹದೇವಯ್ಯ (ಸರ್ಕಾರಿ ಪ್ರೌಢಶಾಲೆ ಬಿಳಗುಂಬ ರಾಮನಗರ ತಾಲ್ಲೂಕು) ರಾಮನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕ ಶಿವರಾಮ್ ಹಾಗೂ ಇಂಗ್ಲಿಷ್ ಶಿಕ್ಷಕ ರೂಪೇಶ್ ಅವರು ಸುಲಭವಾಗಿ ಅಂಕ ಗಳಿಸುವ ಟಿಪ್ಸ್‌ಗಳನ್ನು ನೀಡಲಿದ್ದಾರೆ.

ಯಶವಂತ್ ವಿ. ಗುರುಕರ್ ಜಿಲ್ಲಾಧಿಕಾರಿ ಬೆಂಗಳೂರು ದಕ್ಷಿಣ ಜಿಲ್ಲೆ
ಅನ್ಮೋಲ್ ಜೈನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯಿತಿ ಬೆಂಗಳೂರು ದಕ್ಷಿಣ ಜಿಲ್ಲೆ
ಆರ್. ಶ್ರೀನಿವಾಸ ಗೌಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬೆಂಗಳೂರು ದಕ್ಷಿಣ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.