ADVERTISEMENT

ವಿಧಾನಪರಿಷತ್ ಚುನಾವಣೆ: ಮತದಾನಕ್ಕೆ ಸಿದ್ಧತೆ

ಪ್ರಮುಖ ಪಕ್ಷಗಳ ಅಭ್ಯರ್ಥಿಗಳಿಗೆ ಸತ್ವ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 22:03 IST
Last Updated 8 ಡಿಸೆಂಬರ್ 2021, 22:03 IST
ಎಸ್‌. ರವಿ
ಎಸ್‌. ರವಿ   

ರಾಮನಗರ: ಬೆಂಗಳೂರು ಗ್ರಾಮಾಂತರ– ರಾಮನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಇದೇ 10ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.

ಕಳೆದ ಒಂದು ತಿಂಗಳಿನಿಂದಲೂ ಉಭಯ ಜಿಲ್ಲೆಗಳಲ್ಲಿ ಚುನಾವಣೆ ಕಾವು ಇದೆ. ಮೂರೂ ಪ್ರಮುಖ ಪಕ್ಷಗಳಿಂದ ಅಭ್ಯರ್ಥಿಗಳು ಕಣದಲ್ಲಿ ಇದ್ದು, ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಪಕ್ಷಗಳ ನಾಯಕರೂ ಸಾಥ್‌ ನೀಡಿದ್ದು, ಮೂವರೂ ಗೆಲುವಿನ ವಿಶ್ವಾಸದಲ್ಲಿ ಇದ್ದಾರೆ. ಕಾಂಗ್ರೆಸ್‌ನಿಂದ ಎಸ್‌. ರವಿ, ಬಿಜೆಪಿಯಿಂದ ನಾರಾಯಣ ಸ್ವಾಮಿ ಹಾಗೂ ಜೆಡಿಎಸ್‌ನಿಂದ ರಮೇಶ ಗೌಡ ಕಣದಲ್ಲಿ ಇದ್ದಾರೆ.

ಎರಡು ಜಿಲ್ಲೆಗಳಿಂದ ಒಟ್ಟು 8 ವಿಧಾನಸಭಾ ಕ್ಷೇತ್ರಗಳು ಇವೆ. ಇಲ್ಲಿನ ನಗರಸಭೆ, ಪುರಸಭೆ ಹಾಗೂ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರು ಈ ಚುನಾವಣೆಯಲ್ಲಿ ಮತದಾನದ ಅವಕಾಶ ಪಡೆದಿದ್ದಾರೆ. ಸದ್ಯ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳ ಸದಸ್ಯರ ಅವಧಿ ಮುಗಿದಿದ್ದು, ಹೊಸ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿಲ್ಲ. ಹೀಗಾಗಿ ಅವರು ಮತದಾನದ ಅವಕಾಶದಿಂದ ವಂಚಿತರಾಗಿದ್ದು, ಇದರಿಂದಾಗಿ ಈ ಬಾರಿಯ ಚುನಾವಣೆಯಲ್ಲಿ ಮತದಾರರ ಸಂಖ್ಯೆ ಕಡಿಮೆ ಆಗಿದೆ.

ADVERTISEMENT

ಎರಡೂ ಜಿಲ್ಲೆಗಳಿಂದ 228 ಗ್ರಾಮ ಪಂಚಾಯಿತಿಗಳಿದ್ದು, ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿರುವುದು ವಿಶೇಷ. ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. 14ರಂದು ಬೆಳಗ್ಗೆ 8ಗಂಟೆಯಿಂದ ಮತ ಎಣಿಕೆ ಕಾರ್ಯ ನಿಗದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.