ADVERTISEMENT

ಜೈಲು ಸ್ಥಳಾಂತರ: 68 ಜನರ ವರದಿಗಳು ಮತ್ತೆ ನೆಗೆಟಿವ್‌

ಹಸಿರು ವಲಯವಾಗಿಯೇ ಉಳಿದ ರಾಮನಗರ

​ಪ್ರಜಾವಾಣಿ ವಾರ್ತೆ
Published 7 ಮೇ 2020, 10:43 IST
Last Updated 7 ಮೇ 2020, 10:43 IST

ರಾಮನಗರ: ಜೈಲು ಸ್ಥಳಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಾರಂಟೈನ್‌ಗೆ ಒಳಗಾಗಿದ್ದ ಜೈಲು ಸಿಬ್ಬಂದಿ, ನಗರಸಭೆ ಸಿಬ್ಬಂದಿ ಹಾಗೂ ಪೊಲೀಸರೂ ಸೇರಿದಂತೆ 68 ಮಂದಿಯ ಮಾದರಿ ಪರೀಕ್ಷೆ ಮತ್ತೊಮ್ಮೆ ನೆಗೆಟಿವ್ ಆಗಿದೆ. ಈ ಮೂಲಕ ರಾಮನಗರ ಜಿಲ್ಲೆ ಹಸಿರು ವಲಯವಾಗಿಯೇ ಉಳಿದಿದೆ.

ಈ 68 ಮಂದಿಯ ಗಂಟಲ ದ್ರವ ಮಾದರಿಯನ್ನು ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಎರಡನೇ ಬಾರಿಯೂ ನೆಗೆಟಿವ್ ಎಂದು ಬಂದಿದೆ. ರಾಮನಗರ ಜೈಲಿಗೆ ಬಂದಿದ್ದ ಪಾದರಾಯನಪುರ ಸೋಂಕಿತರ ಸಂಪರ್ಕದಲ್ಲಿದ್ದ ಜೈಲು ಸಿಬ್ಬಂದಿಯ ಕ್ವಾರಂಟೈನ್ ಮುಂದುವರಿಯಲಿದೆ. ಈ ಸಿಬ್ಬಂದಿಯ ದ್ವಿತೀಯ ಹಂತದ ಸಂಪರ್ಕಕ್ಕೆ ಬಂದಿದ್ದ ನಗರಸಭೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯ ಕ್ವಾರಂಟೈನ್‌ ಅವಧಿಯು ಗುರುವಾರ ಮುಕ್ತಾಯಗೊಳ್ಳಲಿದ್ದು, ಅವರು ಮನೆಗೆ ಮರಳಲಿದ್ದಾರೆ. ಏಪ್ರಿಲ್‌ 21ರಂದು ಪಾದರಾಯನಪುರ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಅವರಲ್ಲಿ ಐದು ಮಂದಿಗೆ ಕೋವಿಡ್‌-19 ಸೋಂಕು ತಗುಲಿರುವುದು ಖಾತ್ರಿಯಾಗುತ್ತಿದ್ದಂತೆ ಇಲ್ಲಿಂದ ಹಜ್‌ ಭವನಕ್ಕೆ ಕರೆದೊಯ್ಯಲಾಗಿತ್ತು. ಜೈಲಿನ ಸುತ್ತಲಿನ 100 ಮೀಟರ್‌ಪ್ರದೇಶವನ್ನು ಸೀಲ್‌ಡೌನ್‌ ಮಾಡಿದ್ದು, 41 ಸಿಬ್ಬಂದಿಯನ್ನು ಕ್ವಾರಂಟೈನ್‌ ಮಾಡಿದ್ದು, ಅವರೊಟ್ಟಿಗೆ ದ್ವಿತೀಯ ಸಂಪರ್ಕಕ್ಕೆ ಬಂದ ನಗರಸಭೆ ಸಿಬ್ಬಂದಿ ಹಾಗೂ ಪೊಲೀಸರೂ ಸಹ ಕ್ವಾರಂಟೈನ್‌ಗೆ ಒಳಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT