ADVERTISEMENT

ನಟ ಕಮಲ್ ಹಾಸನ್‌ ವಿರುದ್ಧ ಕನಕಪುರ ಕೋರ್ಟ್‌ನಲ್ಲಿ ಖಾಸಗಿ ದೂರು

ಭಾಷಾ ವಿವಾದ: ಜುಲೈ 5ರಂದು ವಿಚಾರಣೆ, ಸಾಕ್ಷಿಯಾಗಿ ನಟ ಶಿವರಾಜ್‌ಕುಮಾರ್‌ ಪರಿಗಣಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:48 IST
Last Updated 2 ಜುಲೈ 2025, 15:48 IST
<div class="paragraphs"><p>ಕಮಲ್ ಹಾಸನ್</p></div>

ಕಮಲ್ ಹಾಸನ್

   

ಕನಕಪುರ (ರಾಮನಗರ): ಕನ್ನಡ ಹುಟ್ಟಿದ್ದು ತಮಿಳು ಭಾಷೆಯಿಂದ ಎಂದು ಹೇಳಿರುವ ಬಹುಭಾಷಾ ನಟ ಪಾರ್ಥಸಾರಥಿ ಶ್ರೀನಿವಾಸನ್ ಅಲಿಯಾಸ್ ಕಮಲ್ ಹಾಸನ್ ವಿರುದ್ಧ ಕನಕಪುರದ ಎರಡನೇ ಅಪರ ಸಿವಿಲ್ ಮತ್ತು ಜೆಎಂಎಫ್‌ ನ್ಯಾಯಾಲಯದಲ್ಲಿ ಸೋಮವಾರ ಖಾಸಗಿ ಕ್ರಿಮಿನಲ್‌ ದೂರು(ಪಿಸಿಆರ್) ದಾಖಲಾಗಿದೆ.

ಶ್ರೀರಾಮ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ನಾಗಾರ್ಜುನಗೌಡ ಎಂಬುವರು ಈ ದೂರು ದಾಖಲಿಸಿದ್ದಾರೆ. ಜುಲೈ 5ರಂದು ನ್ಯಾಯಾಲಯವು ದೂರನ್ನು ವಿಚಾರಣೆ ಕೈಗೆತ್ತಿಕೊಳ್ಳಲಿದೆ. 

ADVERTISEMENT

ಭಾಷಾ ವಿವಾದ ಸೃಷ್ಟಿಸಿದ ಕಮಲ್‌ ಹಾಸನ್‌ ಹೇಳಿಕೆ ನೀಡಿದ ಆ ಸಮಾರಂಭದಲ್ಲಿ ಭಾಗವಹಿಸಿದ್ದ ನಟ ಡಾ.ಶಿವರಾಜ್‌ಕುಮಾರ್ ಅವರನ್ನು ಪ್ರತ್ಯಕ್ಷ ಸಾಕ್ಷಿಯಾಗಿ ಪರಿಗಣಿಸುವಂತೆ ದೂರುದಾರರು ಮನವಿ ಮಾಡಿದ್ದಾರೆ. 

ಕನ್ನಡ ಭಾಷೆಯ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ನಟ ಕಮಲ್‌ ಹಾಸನ್‌ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನಾಗಾರ್ಜುನಗೌಡ ಜೂನ್ 5 ರಂದು ಕನಕಪುರ ಗ್ರಾಮಾಂತರ ಠಾಣೆಗೆ ಖಾಸಗಿ ದೂರು ಸಲ್ಲಿಸಿದ್ದರು.

ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿ ಜೂನ್ 9 ರಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು. ಅವರಿಂದಲೂ ಸೂಕ್ತ ಸ್ಪಂದನೆ ದೊರೆಯಲಿಲ್ಲ ಎಂದು ಕನಕಪುರ ಜೆಎಂಎಫ್‌ ನ್ಯಾಯಾಲಯದಲ್ಲಿ ಜೂನ್ 30 ರಂದು ಖಾಸಗಿ ದೂರು ದಾಖಲಿಸಿದ್ದಾರೆ.

‘ಕಮಲ್‌ ಹಾಸನ್ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯವು ಉಚ್ಚ ಹಾಗೂ ಸರ್ವೋಚ್ಚ ನ್ಯಾಯಾಲಯಗಳ ಅಭಿಪ್ರಾಯ ಹಾಗೂ ಪ್ರತ್ಯಕ್ಷ್ಯ ಸಾಕ್ಷಿಯ ಹೇಳಿಕೆ ಪರಿಗಣಿಸಬೇಕು. ಪ್ರಕರಣದ ತನಿಖೆ ನಡೆಸಿ, ಚಾರ್ಜ್‌ಶಿಟ್‌ ಸಲ್ಲಿಸುವಂತೆ ರಾಮನಗರ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಬೇಕು’ ಎಂದು ಅವರು ದೂರಿನಲ್ಲಿ ಕೋರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.