ADVERTISEMENT

ಖಾಸಗಿ ಕಷಿಮುಷ್ಠಿಯಿಂದ ಕಲ್ಯಾಣಿಗಳ ರಕ್ಷಿಸಿ

ಮಾಗಡಿ ಪಟ್ಟಣದ ಚಾರಿತ್ರಿಕ ಸಿಹಿನೀರಿನ ಕಲ್ಯಾಣಿಗಳನ್ನು ಮುಂದಿನ ಪೀಳಿಗೆಗೆ ರಕ್ಷಿಸಿ ಉಳಿಸಲು ಮನವಿ

ದೊಡ್ಡಬಾಣಗೆರೆ ಮಾರಣ್ಣ
Published 26 ಮೇ 2020, 0:57 IST
Last Updated 26 ಮೇ 2020, 0:57 IST
ಮಾಗಡಿ ದಂಡಪ್ಪನಾಯಕನ ಕಲ್ಯಾಣಿ ದುರಸ್ತಿ ಕಳಪೆಯಿಂದ ನಡೆಯುತ್ತಿದೆ
ಮಾಗಡಿ ದಂಡಪ್ಪನಾಯಕನ ಕಲ್ಯಾಣಿ ದುರಸ್ತಿ ಕಳಪೆಯಿಂದ ನಡೆಯುತ್ತಿದೆ   

ಮಾಗಡಿ: ವಿನಾಶದ ಅಂಚಿನಲ್ಲಿ ಇರುವ ಚಾರಿತ್ರಿಕ ದಂಡಪ್ಪ ನಾಯಕನ ಕಲ್ಯಾಣಿ ಮತ್ತು ಇತರ ಕಲ್ಯಾಣಿಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಿದೆ ಎಂಬುದು ಇತಿಹಾಸ ಪ್ರಿಯರ ಒತ್ತಾಯ.

ಪಟ್ಟಣದ ಗೌರಮ್ಮನ ಕೆರೆಯಿಂದ ತಿರುವೆಂಗಳನಾಥ ದೇವಾಲಯದವರೆಗಿನ 2 ಕಿ.ಮೀವರೆಗೆ ರಸ್ತೆ ಎರಡು ಬದಿಯಲ್ಲಿ 135 ಕಲ್ಯಾಣಿಗಳಿದ್ದವು. ಚೋಳರದೊರೆ ರಾಜೇಂದ್ರನಿಂದ ಆರಂಭವಾಗಿ ಗಂಗರು, ಚಾಲುಕ್ಯರು, ಹೊಯ್ಸಳರು, ವಿಜಯನಗರ ಅರಸರು, ಕೆಂಪೇಗೌಡರ ವಂಶಜರು, ಸ್ಥಳೀಯ ಪಾಳೇಗಾರರು ಜನ ಜಾನುವಾರುಗಳಿಗಾಗಿ 135 ಕೆರೆಗಳನ್ನು ನಿರ್ಮಿಸಿದ್ದ ದಾಖಲೆಗಳಿವೆ.

ನಾಯಕನ ಕಲ್ಯಾಣಿ: ವಿಜಯನಗರ ಸಾಮ್ರಾಜ್ಯದ ದಕ್ಷಿಣದ ಮಹಾ ಗಡಿ ಕ್ರಮೇಣ ಮಾಗಡಿಯಾಗಿದೆ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ. ದಂಡಪ್ಪ ನಾಯಕ ತಿರುಮಲೆ ರಂಗನಾಥಸ್ವಾಮಿ ಜಾತ್ರೆಯಲ್ಲಿ ಭಕ್ತರ ಅನ್ನದಾಸೋಹಕ್ಕೆ ಬಳಸುವ ನೀರಿಗಾಗಿ ನರಸಿಂಹದ ದೇವರ ಬೆಟ್ಟದಿಂದ ಹರಿದು ಬರುವ ಒರತೆ ನೀರನ್ನುಸಂಗ್ರಹಿಸಲು ರಂಗನಾಥಸ್ವಾಮಿ ದೇವಾಲಯದ ಪಶ್ಚಿಮ ದಿಕ್ಕಿನಲ್ಲಿ ಕಲ್ಯಾಣಿ ಕಟ್ಟಿಸಿದ್ದರು. ಕಲ್ಯಾಣಿ ಇಂದು ಮುಜರಾಯಿ ಇಲಾಖೆ ದಿವ್ಯ ನಿರ್ಲಕ್ಷ್ಯದಿಂದಾಗಿ ವಿನಾಶದತ್ತ ಸಾಗಿದೆ.

ADVERTISEMENT

ಕೆರೆಕಟ್ಟೆ ಕಲ್ಯಾಣಿ ಮತ್ತು ಗುಡಿ ಗೋಪುರಗಳು ಮಾಗಡಿ ಮುತ್ತುಗಳಿದ್ದಂತೆ ಎಂದು ತಿರುಮಲೆ ಕವಿ ಶ್ರೀನಿವಾಸ ತನ್ನ ಕೃತಿ ’ಭಾರತೀಯ ಸ್ತ್ರೀಪರ್ವ‘ದಲ್ಲಿ ದಂಡಪ್ಪ ನಾಯಕನ ಕಲ್ಯಾಣಿ ಬಗ್ಗೆ ವಿವರಿಸಿದ್ದಾರೆ. ಮಾಗಡಿ ಗಂಗೆ ಎಂಬ ಬಿರುದಿಗೆ ಹೆಸರಾಗಿದ್ದ ದಂಡಪ್ಪ ನಾಯಕನ ಕಲ್ಯಾಣಿ ನೀರು ಬಯಲು ಶೌಚಾಲಯಕ್ಕೆ ಬಳಸಲಾಗುತ್ತಿದೆ.

ಜೋಡು ಕಲ್ಯಾಣಿ: ತಿರುಮಲೆ ಕೋತಿಕಟ್ಟೆಕೆರೆ ಈಶಾನ್ಯ ದಿಕ್ಕಿನಲ್ಲಿ ರಾಜೇಂದ್ರ ಚೋಳನ ಕಾಲದಲ್ಲಿ ಜೋಡು ಕಲ್ಯಾಣಿಗಳನ್ನು ಕಟ್ಟಿಸಲಾ
ಯಿತು. ಇಡೀ ವರ್ಷ ತಿರುಮಲೆ ಗ್ರಾಮಕ್ಕೆ ಸಿಹಿನೀರು ಒದಗಿಸುತ್ತಿದ್ದ ಕಲ್ಯಾಣಿಗಳು ನವ ನಾಗರಿಕತೆಗೆ ಸಿಲುಕಿ ವಿನಾಶದ ಅಂಚಿಗೆ
ತಲುಪಿವೆ.

ಕರಣಿಕರ ಕಲ್ಯಾಣಿ: ನಟರಾಜ ಬಡಾವಣೆ ಮತ್ತು ಎನ್‌ಇಎಸ್‌ ಬಡಾವಣೆ ನಡುವೆ ಇರುವ ಕರಣೀಕರ ಕಲ್ಯಾಣಿ ಇಂದಿಗೂ
ಸುರಕ್ಷಿತವಾಗಿವೆ. ಕಣ್ವಾನದಿ ಉಗಮ ಸ್ಥಳ ಎಂಬುದು ಕರಣೀಕರ ವಂಶಜರ ಮಾತು. ಕರಣೀಕರು ಅಪರಕರ್ಮ ಮಾಡಲು ಬಳಸುತ್ತಿದ್ದ ಕಲ್ಲಿನ ಮಂಟಪವಿದೆ. ಕಲ್ಯಾಣಿ ಬಳಿ ಇದ್ದ ಸರ್ಕಾರಿ ಭೂಮಿ ಅಕ್ರಮವಾಗಿ ಒತ್ತುವರಿಯಾಗಿದೆ.

ಸುಬ್ಬಾಶಾಸ್ತ್ರಿ ಕಲ್ಯಾಣಿ: ತಿರುಮಲೆ ರಸ್ತೆ ಲೋಕೋಪಯೋಗಿ ಕಚೇರಿ ಮುಂದೆ ಇದ್ದ ಸುಬ್ಬಾಶಾಸ್ತ್ರಿ ಕಲ್ಯಾಣಿಯನ್ನು ಮುಚ್ಚಿ ನಿವೇಶನ ಮಾಡಲಾಗಿದೆ. ಖಾಸಗಿ ವ್ಯಕ್ತಿಗಳು ಕಲ್ಯಾಣಿ ಜಾಗದಲ್ಲಿ ಬೃಹತ್‌ ಕಟ್ಟಡಗಳನ್ನು ಕಟ್ಟಿಸಿದ್ದಾರೆ.

ರಂಗಸ್ವಾಮಿ ಶೆಟ್ಟರ ಕಲ್ಯಾಣಿ: ತಿರುಮಲೆ ರಸ್ತೆ ಉತ್ತರ ದಿಕ್ಕಿನಲ್ಲಿ ಇರುವ ರಂಗಸ್ವಾಮಿ ಶೆಟ್ಟರ ಹೆಸರಿನ ಕಲ್ಯಾಣಿ ಖಾಸಗಿಯವರ
ವಶದಲ್ಲಿದೆ.

ಗುಂಡಯ್ಯನ ಕಲ್ಯಾಣಿ: ಚೋಳರ ರಾಜೇಂದ್ರನಿಂದ ನಿರ್ಮಿಸಿದ್ದ ಬೃಹತ್‌ ಕಲ್ಯಾಣಿ ಖಾಸಗಿ ವ್ಯಕ್ತಿಗಳ ವಶದಲ್ಲಿದೆ. ಗುಂಡಯ್ಯಶೆಟ್ಟರ ಕಲ್ಯಾಣಿ ಎಂದು ಕರೆಯಲಾಗುತ್ತದೆ. ಪಟ್ಟಣದ ಹೋಟೆಲ್‌ಗಳಿಗೆ ಕುಡಿಯುವ ನೀರು ಈಗಲೂ ಒದಗಿಸುವ ಕಲ್ಯಾಣಿ ಇದಾಗಿದೆ. ಕಲ್ಯಾಣಿ ಸುತ್ತಲೂ ಕೆಂಪೇಗೌಡರ ವಂಶಜರು ಕಟ್ಟಿಸಿರುವ ಅರವಟಿಕೆಗಳಿವೆ.

ನಾಗರಕಲ್ಯಾಣಿ: ಗುಂಡಯ್ಯನಕಲ್ಯಾಣಿ ಪಶ್ಚಿಮಕ್ಕೆ ಇದ್ದ ನಾಗರಕಲ್ಯಾಣಿಯನ್ನು ಖಾಸಗಿ ವ್ಯಕ್ತಿಗಳು ಮುಚ್ಚಿದ್ದಾರೆ.

ರಾಯರ ಕಲ್ಯಾಣಿ: ತಿರುಮಲೆ ರಸ್ತೆ ರಾಘವೇಂದ್ರಸ್ವಾಮಿ ಮಠದ ಎದುರಿನಲ್ಲಿ ಶಿಥಿಲವಾಗಿರುವ ರಾಯರ ಕಲ್ಯಾಣಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.