
ರಾಮನಗರ: ಸಾರ್ವಜನಿಕ ಸ್ಥಳಗಳಾದ ರಸ್ತೆ, ಶಾಲಾ–ಕಾಲೇಜು ಮೈದಾನ ಹಾಗೂ ಸರ್ಕಾರಿ ಜಾಗಗಳಲ್ಲಿ ನಮಾಜ್ ಸೇರಿದಂತೆ ಇತರ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲಾಡಳಿತ ಅದಕ್ಕೆ ನಿರ್ಬಂಧ ವಿಧಿಸಬೇಕು ಎಂದು ಒತ್ತಾಯಿಸಿ ಶ್ರೀರಾಮ ಸೇನೆ ಮುಖಂಡರು ನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಕಚೇರಿ ಎದುರು ಜಮಾಯಿಸಿದ ಮುಖಂಡರು, ಸರ್ಕಾರ ಸಾರ್ವಜನಿಕ ಸ್ಥಳಗಳ ದುರುಪಯೋಗ ತಡೆಯಬೇಕು ಎಂದು ಆಗ್ರಹಿಸಿದರು. ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಸೇನೆಯ ದಕ್ಷಿಣ ಪ್ರಾಂತ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಾರ್ಜುನ ಗೌಡ, ‘ರಾಜ್ಯದ ವಿವಿಧೆಡೆ ಪ್ರತಿ ಶುಕ್ರವಾರ ಹಾಗೂ ವಿಶೇಷ ದಿನಗಳಲ್ಲಿ ರಸ್ತೆ, ಬಸ್ ನಿಲ್ದಾಣ, ಸರ್ಕಾರಿ ಕಚೇರಿ ಆವರಣ, ಶಾಲಾ ಮೈದಾನ, ಉದ್ಯಾನ ಮತ್ತು ಸಾರ್ವಜನಿಕ ತೆರಿಗೆ ಹಣದಿಂದ ನಿರ್ಮಾಣವಾಗಿರುವ ಸ್ಥಳಗಳನ್ನು ಸಾಮೂಹಿಕ ನಮಾಜ್‌ಗಾಗಿ ಆಕ್ರಮಿಸಿಕೊಳ್ಳಲಾಗುತ್ತಿದೆ’ ಎಂದು ದೂರಿದರು.
‘ರಸ್ತೆ ಅತಿಕ್ರಮಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ವಾಹನಗಳ ಸಂಚಾರ, ತುರ್ತು ಸೇವೆಗಳಿಗೆ ವಾಹನಗಳು ತ್ವರಿತವಾಗಿ ಹೋಗಲು ಸಾಧ್ಯವಾಗುವುದಿಲ್ಲ. ಸಂವಿಧಾನದ 14ನೇ ವಿಧಿಯ ಪ್ರಕಾರ ಸರ್ಕಾರ ಎಲ್ಲ ಧರ್ಮಗಳ ವಿಷಯದಲ್ಲಿ ಸಮನವಾಗಿಗಿ ವರ್ತಿಸಬೇಕಾಗಿದೆ. ಆದರೆ ಹಿಂದೂ ಧರ್ಮದ ಹಬ್ಬಗಳು, ಜಾತ್ರೆಗಳು, ಗಣೇಶೋತ್ಸವ, ರಾಮನವಮಿ ಮೆರವಣಿಗೆಗಳಿಗೆ ಮಾತ್ರ ಕಟ್ಟುನಿಟ್ಟಿನ ನಿಯಮ ಹೇರಲಾಗುತ್ತದೆ. ಬೇರೆ ಧರ್ಮಗಳ ವಿಷಯದಲ್ಲಿ ಸರ್ಕಾರ ಜಾಣ ಕುರುಡು ಪ್ರದರ್ಶಿಸುತ್ತಿದೆ’ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಸೇನೆಯ ಮುಖಂಡರಾದ ರಾಜೇಶ್, ಪರಮೇಶ್ ಗೌಡ, ನವೀನ್ ಕೆ.ಎನ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.