ADVERTISEMENT

‘ರಾಜಕೀಯ ಸೇಡಿನಿಂದ ಡಿ.ಕೆ.ಶಿ ಬಂಧನ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 13:31 IST
Last Updated 4 ಸೆಪ್ಟೆಂಬರ್ 2019, 13:31 IST
ಡಿ.ಕೆ.ಶಿವಕುಮಾರ್‌ ಬಂಧನ ವಿರೋಧಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕಲ್ಯಾಬಾಗಿಲು ಬಳಿ ಧರಣಿ ನಡಸಿದರು
ಡಿ.ಕೆ.ಶಿವಕುಮಾರ್‌ ಬಂಧನ ವಿರೋಧಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಕಲ್ಯಾಬಾಗಿಲು ಬಳಿ ಧರಣಿ ನಡಸಿದರು   

ಮಾಗಡಿ: ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬುಧವಾರ ಬೆಳಿಗ್ಗೆ 10 ಗಂಟೆಯಿಂದ 11ರವರೆಗೆ ಕಲ್ಯಾಬಾಗಿಲು ನಾರಸಿಂಹ ವೃತ್ತದ ಬಳಿ ಬೆಂಗಳೂರು ಕುಣಿಗಲ್‌ ರಸ್ತೆಯಲ್ಲಿ ಕುಳಿತು ಧರಣಿ ನಡೆಸಿದರು.

ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಬಸ್ ಸಂಚಾರ ನಿಲ್ಲಿಸಲಾಗಿತ್ತು.

ಕಾಂಗ್ರೆಸ್ ಮುಖಂಡ ಜಿ.ಕೃಷ್ಣ ಮಾತನಾಡಿ ‘ದೇಶದಲ್ಲಿ ಡಿ.ಕೆ.ಶಿವಕುಮಾರ್ ಅವರಿಗಿಂತ ಹೆಚ್ಚಿನ ಸಂಪತ್ತು ಗಳಿಸಿದವರು ಇಲ್ಲವೇ. ರಾಜಕೀಯ ಸೇಡಿಗಾಗಿ ಡಿಕೆಶಿ ಅವರನ್ನು ಬಂಧಿಸಲಾಗಿದೆ. ಜನನಾಯಕರಾದ ಅವರ ಹೆಸರಿಗೆ ಮಸಿ ಬಳಿಯಲು ಮೋದಿ ಮತ್ತು ಅಮಿತ್ ಶಾ ಹೂಡಿರುವ ಹುನ್ನಾರವಿದು. ಬಿಜೆಪಿ ಜನಸೇವೆ ಮಾಡುವುದನ್ನು ಮರೆತು ಸರ್ವಾಧಿಕಾರಿಯಂತೆ ವರ್ತಿಸುತ್ತಿರುವುದು ದೇಶಕ್ಕೆ ಮಾರಕವಾಗಲಿದೆ. ಕೂಡಲೇ ಅವರನ್ನು ಬಿಡುಗಡೆಗೊಳಿಸದಿದ್ದರೆ ಹೋರಾಟದ ಸ್ವರೂಪ ಬದಲಾಗಲಿದೆ’ ಎಂದರು.

ADVERTISEMENT

ಜೆಡಿಎಸ್ ಅಧ್ಯಕ್ಷ ಎಂ.ರಾಮಣ್ಣ ಮಾತನಾಡಿ, ‘ಈ ಬಂಧನ ಬಿಜೆಪಿಯ ಅತೃಪ್ತ ನೀತಿಯನ್ನು ತೋರಿಸುತ್ತಿದೆ. ಬಂಧನದಲ್ಲಿ ಇರಬೇಕಾದವರು ದೇಶದ ಗೃಹ ಸಚಿವರಾದ್ದಾರೆ. ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡ ಕಲ್ಕೆರೆ ಶಿವಣ್ಣ, ಕೆ.ಕೃಷ್ಣಮೂರ್ತಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್, ದೊಡ್ಡಿ ಲಕ್ಷ್ಮಣ್, ಜೆಡಿಎಸ್‌ ಮುಖಂಡರಾದ ಎಂ.ಎನ್.ಮಂಜುನಾಥ್, ನಯಾಜ್ ಅಹಮದ್, ರಿಯಾಜ್, ಸಿದ್ದರಾಜು ಈಡಿಗ, ಹೊಸಪೇಟೆ ಅಶ್ವಥ್, ಮೂರ್ತಿ, ಹೊಸಪಾಳ್ಯ ಶಿವರಾಮಯ್ಯ, ತ್ಯಾಗದೆರೆಪಾಳ್ಯದ ರಂಗಸ್ವಾಮಯ್ಯ, ಕಲ್ಕೆರೆ ಉಮೇಶ್, ಶಿವರಾಜ್ ಮಾತನಾಡಿ ಡಿ.ಕೆ.ಶಿ ಬಿಡುಗಡೆಗೆ ಆಗ್ರಹಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ರಸ್ತೆ ತಡೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ರಸ್ತೆ ತಡೆ ನಡೆಸಿದ್ದರಿಂದ ವಾಹನ ದಟ್ಟಣೆ ಉಂಟಾಗಿ ಪ್ರಯಾಣಿಕರು ಪರದಾಡುವಂತಾಯಿತು. ಸರ್ಕಲ್ ಇನ್‌ಸ್ಪೆಕ್ಟರ್‌ ರವಿಕುಮಾರ್, ಸಬ್ ಇನ್‌ಸ್ಪೆಕ್ಟರ್ ಟಿ.ವೆಂಕಟೇಶ್ ಹಾಗೂ ಸಿಬ್ಬಂದಿ ಸ್ಥಳದಲ್ಲಿದ್ದು, ಪ್ರತಿಭಟನೆ ನಿರತರ ಮನವೊಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.