ಚನ್ನಪಟ್ಟಣ: ಇಂಧನ ಬೆಲೆ ಏರಿಕೆ ಖಂಡಿಸಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾಂಗ್ರೆಸ್ ವತಿಯಿಂದ ಶುಕ್ರವಾರ ತಾಲ್ಲೂಕಿನ ವಿವಿಧ ಪೆಟ್ರೋಲ್ ಬಂಕ್‌ಗಳ ಎದುರು ಪ್ರತಿಭಟನೆ ನಡೆಸಲಾಯಿತು.
ಪೆಟ್ರೋಲ್ ಬೆಲೆ ನೂರರ ಗಡಿ ದಾಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ಜನಸಾಮಾನ್ಯರ ಬದುಕಿಗೆ ತೊಂದರೆಯಾಗಿರುವ ಬೆಲೆಏರಿಕೆ ನಿಯಂತ್ರಿಸಬೇಕು ಹಾಗೂ ಕೂಡಲೇ ಇಂಧನ ಬೆಲೆ ಇಳಿಸಬೇಕು ಎಂದು ಆಗ್ರಹಿಸಿದರು.
‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಚ್ಛೇ ದಿನ್ ಎಂದರೆ ಇದೇನಾ? ಪೆಟ್ರೋಲ್ ಬೆಲೆ ಸಾರ್ವಕಾಲಿಕ ಏರಿಕೆ ಮಾಡಿ ಜನಸಾಮಾನ್ಯರ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾದಾಗ ಮಹಿಳಾ ನಾಯಕಿಯರೂ ಸೇರಿದಂತೆ ಬಿಜೆಪಿಯವರು ಪ್ರತಿಭಟನೆಗೆ ಇಳಿದಿದ್ದರು. ಈಗ ಅವರೆಲ್ಲರೂ ಮೋದಿಗೆ ಶರಣಾಗಿ, ತಲೆಬಾಗಿ ನಿಂತಿದ್ದಾರೆ’ ಎಂದು ಪ್ರತಿಭಟನಾನಿರತರು ಹರಿಹಾಯ್ದರು.
ಪಟ್ಟಣದ ವಿವಿಧೆಡೆ ಇರುವ ಪೆಟ್ರೋಲ್ ಬಂಕ್ ಹಾಗೂ ತಾಲ್ಲೂಕಿನ ವಿವಿಧೆಡೆ ಇರುವ ಸುಮಾರು 12 ಪೆಟ್ರೋಲ್ ಬಂಕ್‌ಗಳ ಬಳಿ ಕಾಂಗ್ರೆಸ್ ಮುಖಂಡರು ಏಕಕಾಲಕ್ಕೆ ಪ್ರತಿಭಟನೆ ನಡೆಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್, ಸುನಿಲ್ ಕುಮಾರ್, ರಾಜ್ಯ ಕುಕ್ಕುಟ ಮಹಾಮಂಡಳ ಅಧ್ಯಕ್ಷ ಡಿ.ಕೆ.ಕಾಂತರಾಜು, ಜಿಲ್ಲಾ ಕಾಂಗ್ರೆಸ್ ವಕ್ತಾರ ಹನುಮಂತಯ್ಯ, ಮುಖಂಡ ರಂಗನಾಥ್, ಪಿ.ರಮೇಶ್, ಪಿ.ಡಿ.ರಾಜು, ಶಮೀವುಲ್ಲಾ, ಶರತ್, ಮಲ್ಲೇಶ್, ವಿವೇಕ್, ಬೆಳಕೆರೆ ಗುಂಡಣ್ಣ, ಮುದಗೆರೆ ದೀಪು, ಮಂಜುನಾಥ್, ಉಮೇಶ್, ವಿನೋದ್, ಪಟೇಲ್ ನಾಗೇಶ್, ಮಂಚೇಗೌಡ, ಪ್ರಕಾಶ್, ಸುರೇಶ್ ಕೂರಣಗೆರೆ
ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.