ಚನ್ನಪಟ್ಟಣ: ರಾಮನಗರ ಜಿಲ್ಲೆ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾಯಿಸುವುದನ್ನು ಖಂಡಿಸಿ ರಾಜ್ಯ ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ನಗರದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಯಾವುದೋ ದುರದ್ದೇಶ ಇಟ್ಟುಕೊಂಡು ರಾಮನಗರ ಜಿಲ್ಲೆ ಹೆಸರನ್ನು ಬದಲಾವಣೆ ಮಾಡಲು ಹೊರಟಿದೆ. ಹೆಸರು ಬದಲಾವಣೆ ಮಾಡಿದರೆ ಅಭಿವೃದ್ಧಿ ಆಗುವುದಿಲ್ಲ. ಸರ್ಕಾರ ಮೊದಲು ಜಿಲ್ಲೆ ಅಭಿವೃದ್ಧಿಗೆ ಆದ್ಯತೆ ನೀಡಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಜ್ಯ ಸಂಘದ ವಿಭಾಗೀಯ ಉಪಾಧ್ಯಕ್ಷ ಆಣಿಗೆರೆ ಮಲ್ಲಯ್ಯ ಮಾತನಾಡಿ, ಸಕಾರಣವಿಲ್ಲದೆ ರಾಜಕೀಯ ಹಿತಾಸಕ್ತಿಕ್ಕಾಗಿ ರಾಮನಗರ ಜಿಲ್ಲೆ ಹೆಸರನ್ನು ಬದಲಾಯಿಸಲು ಹೊರಟಿರುವುದು ಸರಿಯಲ್ಲ. ಇದು ಸರ್ಕಾರದ ವೈಜ್ಞಾನಿಕ ನಡೆ. ರಾಜ್ಯ ಬರಗಾಲದಿಂದ ತತ್ತರಿಸಿ ಹೋಗಿದೆ. ರೈತ ಸಮುದಾಯ ಸಾಕಷ್ಟು ಸಮಸ್ಯೆಗಳಿಂದ ನರಳುತ್ತಿದೆ. ಜತೆಗೆ ಬೆಲೆ ಏರಿಕೆಯಿಂದಾಗಿ ಹೈರಾಣಾಗಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸುವ ಬದಲು ಅನವಶ್ಯ ಜಿಲ್ಲೆ ಹೆಸರು ಬದಲಾಯಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರಾಮೇಗೌಡ ಮಾತನಾಡಿ, ರಾಜ್ಯದಲ್ಲಿ ಹಲವು ಹಗರಣಗಳು ನಡೆಯುತ್ತಿವೆ. ಸರ್ಕಾರ ಬಹುಕೋಟಿ ಹಗರಣ ಮೂಲಕ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆ ಎಂದರು.
ತಹಶೀಲ್ದಾರ್ ನರಸಿಂಹಮೂರ್ತಿಗೆ ಮನವಿಪತ್ರ ನೀಡಿ ಸರ್ಕಾರಕ್ಕೆ ತಲುಪಿಸುವಂತೆ ಮನವಿ ಮಾಡಿದರು.
ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಎನ್.ರಾಜು, ಜಿಲ್ಲಾ ಕಾರ್ಯಾಧ್ಯಕ್ಷ ಪುಟ್ಟಸ್ವಾಮಿ, ಪದಾಧಿಕಾರಿಗಳಾದ ಕೋದಂಡರಾಮ, ಬೋರೇಗೌಡ, ಗುರುಲಿಂಗಯ್ಯ, ವೆಂಕಟೇಶ್, ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ಮುನಿರಾಜು, ಮಹಿಳಾ ಘಟಕದ ಪದಾಧಿಕಾರಿಗಳು, ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.