ಚನ್ನಪಟ್ಟಣ: ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಬೈಲಾ ತಿದ್ದುಪಡಿಯಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಕ.ಸಾ.ಪ ಆಜೀವ ಸದಸ್ಯರ ಒಕ್ಕೂಟ, ರೈತಪರ ಹಾಗೂ ಜನಪರ ಸಂಘಟನೆಗಳ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿಭವನದ ಆವರಣದಿಂದ ಹೊರಟ ಪ್ರತಿಭಟನಾಕಾರರು, ಪೊಲೀಸ್ ಠಾಣೆ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಮಹೇಶ್ ಜೋಶಿ ಅಮಾನತು ಮಾಡಿ, ಸಾಹಿತ್ಯ ಪರಿಷತ್ತು ಉಳಿಸಿ ಘೋಷಣೆ ಕೂಗಿದರು. ನಂತರ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಿದರು.
ಕರ್ನಾಟಕ ಸಂಘ ಮಂಡ್ಯ ಘಟಕದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶ್ ಗೌಡ ಮಾತನಾಡಿ, ಸರ್ವಾಧಿಕಾರಿ ಧೋರಣೆ ಹೊಂದಿರುವ ಮಹೇಶ್ ಜೋಶಿ ಪ್ರಜಾಪ್ರಭುತ್ವ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇವರಿಂದಾಗಿ ಪರಿಷತ್ತಿನ ಘನತೆ ಗೌರವ ಹಾಳಾಗಿದೆ. ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಲೆಕ್ಕ ಪತ್ರ ನೀಡದೆ ಭ್ರಷ್ಟಾಚಾರ ನಡೆಸಿದ್ದಾರೆ. ಇಂತಹ ವ್ಯಕ್ತಿಯನ್ನು ಸರ್ಕಾರ ಕೂಡಲೇ ಅಧಿಕಾರದಿಂದ ಕೆಳಗಿಳಿಸಬೇಕೆಂದು ಆಗ್ರಹಿಸಿದರು.
ಜಾನಪದ ವಿದ್ವಾಂಸ ಡಾ.ಚಕ್ಕೆರೆ ಶಿವಶಂಕರ್ ಮಾತನಾಡಿ, ಸಾಹಿತ್ಯ ಪರಿಷತ್ ಜನರ ಪ್ರಾತಿನಿಧಿಕ ಸಂಸ್ಥೆಯಾಗಿದೆ. ಈಗಿರುವ ಅಧ್ಯಕ್ಷರು ಸಾಹಿತಿಯಲ್ಲ. ಸಂಸ್ಕೃತಿಯ ಬಗ್ಗೆ ಅರಿವೂ ಇಲ್ಲ. ಪರಿಷತ್ತಿನಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಪ್ರಶ್ನಿಸಿದವರಿಗೆ ಬೆದರಿಕೆ ಹಾಕುವುದು, ಸದಸ್ಯತ್ವವನ್ನು ರದ್ದು ಮಾಡುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅವರನ್ನು ಅಮಾನತ್ತು ಮಾಡಬೇಕು ಎಂದರು.
ನಂತರ ತಹಶೀಲ್ದಾರ್ ನರಸಿಂಹಮೂರ್ತಿ ಅವರ ಮೂಲಕ ಪ್ರತಿಭಟನಾಕಾರರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪತ್ರಕರ್ತ ಸು.ತ. ರಾಮೇಗೌಡ, ಆಣಿಗೆರೆ ಮಲ್ಲಯ್ಯ, ಸಿ.ಕೆ. ರಾಮೇಗೌಡ, ಕೆ.ಎನ್.ಲಿಂಗೇಗೌಡ, ರಮೇಶ್ ಗೌಡ, ನಾಗವಾರ ಶಂಭುಗೌಡ, ವಸಂತಕುಮಾರ್, ಧರಣೇಶ್ ರಾಂಪುರ, ಎಂ.ಶಿವಮಾದು, ಮತ್ತೀಕೆರೆ ಚಲುವರಾಜು, ಎಂ.ಸಿ. ಮಲ್ಲಯ್ಯ, ಕುಮಾರ್, ಸಾವಿತ್ರಮ್ಮ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.