ರಾಮನಗರ: ತಾಲ್ಲೂಕಿನ ಹರೀಸಂದ್ರದಲ್ಲಿ ನಿರ್ಮಾಣವಾಗುತ್ತಿರುವ ರಾಮನಗರ ನಗರಸಭೆ ಮತ್ತು ಬಿಡದಿ ಪುರಸಭೆಯ ತ್ಯಾಜ್ಯ ನಿರ್ವಹಣಾ ಘಟಕ ವಿರೋಧಿಸಿ ವಿವಿಧ ಗ್ರಾಮಗಳ ಜನರು ಗುರುವಾರ ಧರಣಿ ನಡೆಸಿದರು. ಜೆಡಿಎಸ್ ಪಕ್ಷವೂ ಧರಣಿಗೆ ಕೈ ಜೋಡಿಸಿತ್ತಲ್ಲದೆ, ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಧರಣಿಯಲ್ಲಿ ಭಾಗವಹಿಸಿದರು.
ಧರಣಿಗೂ ಮುಂಚೆ ಬೆಳಿಗ್ಗೆ ಚಿಕ್ಕೇಗೌಡನದೊಡ್ಡಿಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಜಮಾಯಿಸಿದ ಗ್ರಾಮಸ್ಥರು ಹರೀಸಂದ್ರ, ಚಿಕ್ಕೇಗೌಡನ ದೊಡ್ಡಿ, ಕಾಳೇಗೌಡನದೊಡ್ಡಿ, ಪಾದರಹಳ್ಳಿ, ಬೆಜ್ಜರಹಳ್ಳಿಕಟ್ಟೆ, ಮಾರೇಗೌಡನದೊಡ್ಡಿ, ಹನುಮಂತೇಗೌಡನ ದೊಡ್ಡಿ, ಕೆಂಪೇಗೌಡನದೊಡ್ಡಿ, ಮದರ್ ಸಾಬರದೊಡ್ಡಿ, ಆಲೆಮರದದೊಡ್ಡಿ ಗ್ರಾಮಸ್ಥರು, ನಂತರ ತ್ಯಾಜ್ಯ ಘಟಕ ನಿರ್ಮಾಣವಾಗುತ್ತಿರುವ ಹರಿಸಂದ್ರದ ಸರ್ವೆ 166ರ ಸ್ಥಳಕ್ಕೆ ಪಾದಯಾತ್ರೆ ಮೂಲಕ ತೆರಳಿದರು.
ಮಾರ್ಗದುದ್ದಕ್ಕೂ ಭಿತ್ತಿತ್ರ, ಬ್ಯಾನರ್ ಹಿಡಿದು ಸಾಗಿದ ಗ್ರಾಮಸ್ಥರು ಸ್ಥಳೀಯ ಶಾಸಕರು, ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾಡಳಿತ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಘಟಕ ನಿರ್ಮಾಣ ಕೈ ಬಿಡಬೇಕು ಎಂದು ಆಗ್ರಹಿಸಿದರು. ಹರೀಸಂದ್ರ ಪಂಚಾಯಿತಿ ಕಚೇರಿ ಬಳಿ ರಸ್ತೆ ತಡೆದು ಕೆಲ ಹೊತ್ತು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲ ಹೊತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.
ಈ ವೇಳೆ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಎ. ಮಂಜುನಾಥ್, ‘ಸರ್ಕಾರಿ ಗೋಮಾಳದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ರಾಮನಗರ ನಗರಸಭೆಗೆ 9.38 ಎಕರೆ ಹಾಗೂ ಬಿಡದಿ ಪುರಸಭೆ 9 ಎಕರೆ ಮಂಜೂರಾಗಿರುವುದನ್ನು ಕೂಡಲೇ ರದ್ದುಪಡಿಸಬೇಕು. ಇಲ್ಲದಿದ್ದರೆ, ನಮ್ಮ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳಲಿದೆ’ ಎಂದು ಎಚ್ಚರಿಕೆ ನೀಡಿದರು.
ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ‘ಹರಿಸಂದ್ರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೈನುಗಾರಿಕೆ, ರೇಷ್ಮೆ, ಮಾವು , ತೆಂಗು ಬೆಳೆಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ತ್ಯಾಜ್ಯ ಘಟಕ ನಿರ್ಮಾಣವಾಗುವುದರಿಂದ ಕೃಷಿ ಹಾಗೂ ಹೈನುಗಾರಿಕೆ ಮೇಲೆ ಪರಿಣಾಮ ಬೀರಲಿದೆ. ಇನ್ನಾದರೂ ಸ್ಥಳೀಯ ಶಾಸಕರು ಘಟಕ ಕೈ ಬಿಡಬೇಕು’ ಎಂದು ಆಗ್ರಹಿಸಿದರು.
ಪಾದರಹಳ್ಳಿಯ ಚಂದ್ರಶೇಖರ್ ಸೇರಿದಂತೆ ಸ್ಥಳೀಯ ಮುಖಂಡರು ಮಾತನಾಡಿದರು. ಮುಖಂಡರಾದ ವರದರಾಜುಗೌಡ, ಬಿ. ಉಮೇಶ್, ಕೆ. ಚಂದ್ರಯ್ಯ, ಶಿವಕುಮಾರ್, ರಾಮು, ಬಸವನಪುರ ಪ್ರಕಾಶ್, ರಾಮಕೃಷ್ಣಯ್ಯ, ಮಳವಳ್ಳಿ ರಾಜು, ರಾಜಣ್ಣ, ಕೃಷ್ಣಯ್ಯ, ಸಂತೋಷ್, ಬಾಬಣ್ಣ, ರಾಮು, ಅಶ್ವಥ್, ಕೃಷ್ಣಮೂರ್ತಿ, ಕೃಷ್ಣೇಗೌಡ, ಮಹೇಶ್, ಬೋರೇಗೌಡ, ಮೋಹನ್, ಜಯಕುಮಾರ್ ಹಾಗೂ ಇತರರು ಇದ್ದರು.
ಕಾನೂನಾತ್ಮಕವಾಗಿಯೂ ಹೋರಾಟ
ತ್ಯಾಜ್ಯ ಘಟಕಕ್ಕೆ ಗುರುತಿಸಿರುವ ಸ್ಥಳದ ಒಂದು ಕಡೆ ರಾಮದೇವರ ಬೆಟ್ಟವಿದ್ದರೆ ಮತ್ತೊಂದು ಕಡೆ ಅರ್ಕಾವತಿ ನದಿ ಹರಿಯುತ್ತದೆ. ಇಂತಹ ಸ್ಥಳದಲ್ಲಿ ಘಟಕ ನಿರ್ಮಾಣ ಸರಿಯಲ್ಲ. ಇದು ಮೊದಲ ಹಂತದ ಹೋರಾಟವಾಗಿದ್ದು ಮುಂದೆ ಮತ್ತಷ್ಟು ತೀವ್ರಗೊಳ್ಳಲಿದೆ. ಪರ್ಯಾಯವಾಗಿ ಕಾನೂನಾನ್ಮಕವಾಗಿಯೂ ಹೋರಾಟ ಮಾಡಲಾಗುವುದು. ಈ ಭಾಗದ ರೈತರು ಕೃಷಿ ತೋಟಗಾರಿಕೆ ಹಾಗೂ ಹೈನುಗಾರಿಕೆ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಮಾವು ರೇಷ್ಮೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಬದುಕುತ್ತಿದ್ದಾರೆ. ಘಟಕದಿಂದ ಈ ಭಾಗದ ಜನಜೀವನ ಅಸ್ತವ್ಯಸ್ತವಾಗಲಿದೆ. ಪರಿಸರ ಮತ್ತು ಪ್ರಾಣಿ–ಪಕ್ಷಿಗಳಿಗೂ ತೊಂದರೆಯಾಗಲಿದೆ. ಹಾಗಾಗಿ ಪಕ್ಷಾತೀತವಾಗಿ ಈ ಭಾಗದ ಜನ ಘಟಕವನ್ನು ವಿರೋಧಿಸುತ್ತಿದ್ದಾರೆ’ ಎಂದು ನಿಖಿಲ್ ಕುಮಾರಸ್ವಾಮಿ ಧರಣಿ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.