ADVERTISEMENT

ಅಮಿತ್ ಶಾ ವಿರುದ್ಧ ಆಕ್ರೋಶ: ಬೆಂಗಳೂರು–ಮೈಸೂರು ರಸ್ತೆ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2024, 14:31 IST
Last Updated 20 ಡಿಸೆಂಬರ್ 2024, 14:31 IST
ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಗೃಹ ಸಚಿವ ಅಮಿತ್ ಶಾ ಕೇವಲವಾಗಿ ಮಾತನಾಡಿರುವುದನ್ನು ಖಂಡಿಸಿ, ರಾಮನಗರದ ಐಜೂರು ವೃತ್ತದಲ್ಲಿ ಶುಕ್ರವಾರ ದಲಿತ ಸಂಘಟನೆಗಳ ಒಕ್ಕೂಟದ ನೇತ್ವದಲ್ಲಿ  ಪ್ರತಿಭಟನೆ ನಡೆಯಿತು
ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಗೃಹ ಸಚಿವ ಅಮಿತ್ ಶಾ ಕೇವಲವಾಗಿ ಮಾತನಾಡಿರುವುದನ್ನು ಖಂಡಿಸಿ, ರಾಮನಗರದ ಐಜೂರು ವೃತ್ತದಲ್ಲಿ ಶುಕ್ರವಾರ ದಲಿತ ಸಂಘಟನೆಗಳ ಒಕ್ಕೂಟದ ನೇತ್ವದಲ್ಲಿ  ಪ್ರತಿಭಟನೆ ನಡೆಯಿತು   

ರಾಮನಗರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಸಂಸತ್ತಿನ ಅಧಿವೇಶನದಲ್ಲಿ ಕೇವಲವಾಗಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ, ದಲಿತ ಸಂಘಟನೆಗಳ ಒಕ್ಕೂಟದ ನೇತ್ವದಲ್ಲಿ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಯಿತು. ಬೆಳಿಗ್ಗೆ ಐಜೂರು ವೃತ್ತದಲ್ಲಿ ಜಮಾಯಿಸಿದ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು, ಕೆಲ ಹೊತ್ತು ಬೆಂಗಳೂರು–ಮೈಸೂರು ರಸ್ತೆ ತಡೆದು ಪ್ರತಿಭಟಿಸಿದರು.

ಶಾ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಕಿಡಿಕಾರಿದರು. ಅಮಿತ್ ಶಾ ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ ವೇಳೆ, ಅಂಬೇಡ್ಕರ್ ಭಾವಚಿತ್ರಗಳು ರಾರಾಜಿಸಿದವು. ಜೈ ಭೀಮ್ ಘೋಷಣೆಗಳು ಮೊಳಗಿದವು.

ಒಕ್ಕೂಟದ ಅಧ್ಯಕ್ಷ ಶಿವಕುಮಾರ ಸ್ವಾಮಿ ಮಾತನಾಡಿ, ‘ಅಂಬೇಡ್ಕರ್ ಅವರ ವಿರುದ್ಧ ಕೇವಲವಾಗಿ ಮಾತನಾಡಿರುವ ಗೃಹ ಸಚಿವ ಅಮಿತ್ ಶಾ ಸಚಿವರಾಗಿ ಮುಂದುವರಿಯಲು ಅನರ್ಹರು. ತಮ್ಮ ಹೇಳಿಕೆ ಕುರಿತು ಶಾ ಕೂಡಲೇ ಕ್ಷಮೆ ಕೇಳಬೇಕು. ಅಂಬೇಡ್ಕರ್ ವಿರೋಧಿಯಾಗಿರುವ ಅವರನ್ನು ಕೂಡಲೇ ಕೇಂದ್ರ ಸಂಪುಟದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ನಗರಸಭೆ ಸದಸ್ಯ ಕೆ. ಶೇಷಾದ್ರಿ ಶಶಿ ಮಾತನಾಡಿ, ‘ದೇಶದಿಂದಲೇ ಗಡಿಪಾರಾಗಬೇಕಾಗಿದ್ದ ಕೊಲೆಗಡುಕ ಅಮಿತ್ ಶಾ, ಇಂದು ಕೇಂದ್ರದಲ್ಲಿ ಗೃಹ ಸಚಿವರಾಗಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಕಾರಣಕ್ಕೆ ಸಚಿವನಾಗಿರುವ ಅವರು, ಇದೀಗ ಅದೇ ಅಂಬೇಡ್ಕರ್ ವಿರುದ್ಧ ಕೇವಲವಾಗಿ ಮಾತನಾಡಿದ್ದಾರೆ. ಆ ಮೂಲಕ, ತಮ್ಮ ನಿಜ ಬಣ್ಣವನ್ನು ಪ್ರದರ್ಶಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅಮಿತ್ ಶಾ ಅವರ ಅಂಬೇಡ್ಕರ್ ಪ್ರೀತಿ ಕೇವಲ ಬಾಯಿಯಿಂದಲೇ ಹೊರತು ಹೃದಯದಿಂದಲ್ಲ ಎಂಬುದು ಅವರ ಮಾತುಗಳಲ್ಲೇ ವ್ಯಕ್ತವಾಗಿದೆ. ಇದು ಅಮಿತ್ ಶಾ ದುರಹಂಕಾರಕ್ಕೆ ಸಾಕ್ಷಿ. ಅವರ ಸಾಂಸ್ಕೃತಿಕ ಸಂಘಟನೆ ಸಹ ಸಂವಿಧಾನ ಇರುವುದನ್ನು ಹಲವು ಸಂದರ್ಭದಲ್ಲಿ ತೋರಿಸಿದೆ. ಪ್ರಧಾನಿ ಮೋದಿ ಅವರಿಗೆ ಮಾನ–ಮರ್ಯಾದೆ ಇದ್ದರೆ, ಸಂವಿಧಾನದ ಬಗ್ಗೆ ಗೌರವವಿದ್ದರೆ ಕೂಡಲೇ ಶಾ ಅವರನ್ನು ಸಂಪುಟದಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿದರು.

ಮುಖಂಡ ನರಸಿಂಹ ಮಾತನಾಡಿ, ‘ಅಂಬೇಡ್ಕರ್ ಬದಲು ದೇವರನ್ನು ಸ್ಮರಿಸಿದ್ದರೆ ನೀವು ಸ್ವರ್ಗಕ್ಕೆ ಹೋಗುತ್ತಿದ್ರಿ ಎಂದಿರುವ ಅಮಿತ್ ಶಾ, ಸಂವಿಧಾನದ ಬದಲು ಮನು ಸ್ಮೃತಿಯನ್ನೇ ಆರಾಧಿಸುತ್ತಾರೆ ಎಂಬುದು ಅವರ ಮಾತುಗಳಿಂದಲೇ ಗೊತ್ತಾಗಿದೆ. ಅಂಬೇಡ್ಕರ್ ಕುರಿತು ಬಿಜೆಪಿಯವರಿಗೆ ಇರುವ ಭಾವನೆ ಎಂತಹದ್ದು ಎಂಬುದನ್ನು ಅಮಿತ್ ಶಾ ಅಧಿವೇಶನದಲ್ಲೇ ಜಗಜ್ಜಾಹೀರುಗೊಳಿಸಿದ್ದಾರೆ. ಅವರ ಹೇಳಿಕೆ ಖಂಡನೀಯ’ ಎಂದು ಹೇಳಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಮುನಿರಾಜು, ‘ಅಂಬೇಡ್ಕರ್ ಅವರು ಯಾವ ದೇವರಿಗೂ ಏನು ಕಡಿಮೆ ಇಲ್ಲ. ಅವರ ಕಾರಣಕ್ಕಾಗಿ ದೇಶದ ಪ್ರಜೆಗಳು ಗೌರವದಿಂದ ಬದುಕುತ್ತಿದ್ದೇವೆ. ಅಂತಹವರ ಹೆಸರನ್ನು ಎಷ್ಟು ಬಾರಿ ಹೇಳಿದರೂ ಕಡಿಮೆಯೇ. ಅಂತಹವರ ವಿರುದ್ಧವೇ ಕೇವಲವಾಗಿ ಮಾತನಾಡುವ ನೀವು ಗೃಹ ಸಚಿವರಾಗಿ ಮುಂದುವರಿಯಲು ಅನರ್ಹರು’ ಎಂದರು.

ನಂತರ ಒಕ್ಕೂಟದ ಪದಾಧಿಕಾರಿಗಳ ನಿಯೋಗವು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು. ಮುಖಂಡರಾದ ಶಿವಶಂಕರ್, ಪಟ್ಲು ಗೋವಿಂದರಾಜು, ಬಿ.ಸಿ. ಪಾರ್ವತಮ್ಮ, ಚಲುವರಾಜ್, ಪುನೀತ್ ರಾಜ್, ಮಲ್ಲಿಕಾರ್ಜುನ್, ಬಿವಿಎಸ್ ಹರೀಶ್, ವೆಂಕಟೇಶ್, ಅನಿಲ್ ಜೋಗಿಂದರ್, ಗುಡ್ಡೆ ವೆಂಕಟೇಶ್, ನಾಗಮ್ಮ, ಶೇಖರ್, ಸಿದ್ದರಾಜು, ಗವಿಯಯ್ಯ, ಶಿವಲಿಂಗಯ್ಯ ಸೇರಿದಂತೆ ಹಲವರು ಇದ್ದರು.

ಸಿ.ಟಿ. ರವಿ ವಿರುದ್ಧ ಕಿಡಿ

ಬೆಳಗಾವಿ ಅಧಿವೇಶನದಲ್ಲಿ ಸಚಿವ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ವಿರುದ್ಧವೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ರವಿ ಅವರನ್ನು ಕೂಡಲೇ ಪರಿಷತ್ ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕು. ಅಸಂವಿಧಾನಿಕ ಪದಗಳನ್ನು ಬಳಸುವುದನ್ನೇ ರೂಢಿ ಮಾಡಿಕೊಂಡಿರುವ ರವಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.