ADVERTISEMENT

ಸಮಗ್ರ ವ್ಯಕ್ತಿತ್ವಕ್ಕೆ ಅನೌಪಚಾರಿಕ ಶಿಕ್ಷಣವೂ ಬೇಕು: ಎಚ್‌.ಡಿ. ಲಿಂಗರಾಜು

ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಆಡಳಿತಾತ್ಮಕ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 4:43 IST
Last Updated 2 ಆಗಸ್ಟ್ 2025, 4:43 IST
<div class="paragraphs"><p>ರಾಮನಗರ ತಾಲ್ಲೂಕಿನ ಬಿಡದಿಯ ಐಕಾನ್ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ಪ್ರಾಂಶುಪಾಲರಿಗೆ ಹಮ್ಮಿಕೊಂಡಿದ್ದ ಆಡಳಿತಾತ್ಮಕ ತರಬೇತಿ ಕಾರ್ಯಾಗಾರವನ್ನು ಪಿಯು ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಚ್‌.ಡಿ. ಲಿಂಗರಾಜು ಉದ್ಘಾಟಿಸಿದರು. </p></div>

ರಾಮನಗರ ತಾಲ್ಲೂಕಿನ ಬಿಡದಿಯ ಐಕಾನ್ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ಪ್ರಾಂಶುಪಾಲರಿಗೆ ಹಮ್ಮಿಕೊಂಡಿದ್ದ ಆಡಳಿತಾತ್ಮಕ ತರಬೇತಿ ಕಾರ್ಯಾಗಾರವನ್ನು ಪಿಯು ಇಲಾಖೆಯ ನಿವೃತ್ತ ಉಪ ನಿರ್ದೇಶಕ ಎಚ್‌.ಡಿ. ಲಿಂಗರಾಜು ಉದ್ಘಾಟಿಸಿದರು.

   

ಬಿಡದಿ (ರಾಮನಗರ): ‘ವಿದ್ಯಾರ್ಥಿಗಳನ್ನು ವೈಯಕ್ತಿಕ ಮತ್ತು ಸಾಮಾಜಿಕ ಜವಾಬ್ದಾರಿಯುತ ಪ್ರಜೆಗಳನ್ನಾಗಿ ರೂಪಿಸಲು ಔಪಚಾರಿಕ ಶಿಕ್ಷಣದ ಜೊತೆಗೆ ಅನೌಪಚಾರಿಕ ಶಿಕ್ಷಣವನ್ನೂ ಉಪನ್ಯಾಸಕರು ನೀಡಬೇಕು. ಆಗ ಮಾತ್ರ ಮಕ್ಕಳ ಸರ್ವತೋಮುಖ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ನಿವೃತ್ತ ಉಪ ನಿರ್ದೇಶಕ ಎಚ್‌.ಡಿ. ಲಿಂಗರಾಜು ಅಭಿಪ್ರಾಯಪಟ್ಟರು.

ಶಾಲಾ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪ್ರಾಂಶುಪಾಲರ ಸಂಘವು ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಇಲ್ಲಿನ ಐಕಾನ್‌ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಆಡಳಿತಾತ್ಮಕ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ನಾವು ಯಾವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಹಿನ್ನಲೆಯುಳ್ಳ ಮಕ್ಕಳಿಗೆ ಪಾಠ ಮಾಡುತ್ತಿದ್ದೇವೆ ಎಂಬ ತಿಳಿವಳಿಕೆ ಉಪನ್ಯಾಸಕರಿಗೆ ಇರಬೇಕು. ಸರ್ಕಾರಿ ಕಾಲೇಜುಗಳಲ್ಲಿ ಕೂಲಿ ಕಾರ್ಮಿಕರ, ರೈತರ, ಬಡವರ, ದೀನ ದಲಿತರ ಮಕ್ಕಳು ಕಲಿಯುತ್ತಿದ್ದಾರೆ. ಕಾಲಿಗೆ ಚಪ್ಪಲಿ ಇಲ್ಲದ, ತಂದೆ–ತಾಯಿ ಇಲ್ಲದ, ಬೆಳಗಿನ ಉಪಾಹಾರವಿಲ್ಲದ, ಹುಲ್ಲು ತಂದು ಹಾಲು ಮಾರಾಟ ಮಾಡಿ, ದಿನಪತ್ರಿಕೆ ಹಾಕಿ ಕಾಲೇಜಿಗೆ ಬರುವ ಮಕ್ಕಳೇ ಹೆಚ್ಚು’ ಎಂದರು.

ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಂ.ಪಿ. ನಾಗಮ್ಮ ಮಾತನಾಡಿ, ‘ಕಾಲೇಜು ಅವಧಿಯನ್ನು ವಿದ್ಯಾರ್ಥಿಗಳ ಪಠ್ಯ ಕಲಿಕೆಗೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಗೆ ಸದ್ಭಳಕೆ ಮಾಡಿಕೊಳ್ಳಬೇಕು. 20 ಆಂತರಿಕ ಅಂಕ ಮತ್ತು 80 ಬರವಣಿಗೆ ಅಂಕಗಳನ್ನು ಪಡೆದುಕೊಳ್ಳಲು ಪಠ್ಯಕ್ರಮವನ್ನು ಸಕಾಲಿಕವಾಗಿ ಬೋಧಿಸುವುದು ಮುಖ್ಯ’ ಎಂದು ಹೇಳಿದರು.

ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಿ. ಶಿವಣ್ಣ, ‘ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಮಟ್ಟದ ಶ್ರೇಣಿಯಲ್ಲಿ ನಮ್ಮ ಜಿಲ್ಲೆ 19ನೇ ಸ್ಥಾನದಲ್ಲಿದೆ. 10 ಸ್ಥಾನದೊಳಗೆ ಬರಬೇಕಾದರೆ ಮಕ್ಕಳಿಗೆ ಕಲಿಕಾಸಕ್ತಿ ಬೆಳೆಸಬೇಕು. ಗೈರುಹಾಜರಿ ಕಡಿಮೆ ಮಾಡಬೇಕು. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ವಿಶೇಷ ತರಗತಿ ತೆಗೆದುಕೊಂಡು ಬೋಧಿಸಬೇಕು’ ಎಂದರು.

ನಿವೃತ್ತ ಪ್ರಾಂಶುಪಾಲರಿಗೆ, ಜಿಲ್ಲೆಯಿಂದ ವರ್ಗಾವಣೆಗೊಂಡವರಿಗೆ ಹಾಗೂ ವರ್ಗಾವಣೆಯಾಗಿ ಬಂದಿರುವ ಪ್ರಾಂಶುಪಾಲರಿಗೆ ಮತ್ತು ಪದೋನ್ನತಿ ಪಡೆದು ಪ್ರಾಂಶುಪಾಲರಾದವರಿಗೆ ಸನ್ಮಾನಿಸಲಾಯಿತು.

ನಿವೃತ್ತ ಉಪ ನಿರ್ದೇಶಕ ಸಿ.ಕೆ. ಗೋವಿಂದರಾಜು, ಪ್ರಾಂಶುಪಾಲರ ಸಂಘದ ಮಾಜಿ ಅಧ್ಯಕ್ಷ ಜಿ.ಎಚ್‌. ರಾಮಯ್ಯ, ಖಜಾಂಚಿ ಬಿ. ಮಹೇಶ್‌, ಇ.ಎಲ್‌.ಸಿ. ಜಿಲ್ಲಾ ಸಂಚಾಲಕ ಎಂ.ಎನ್‌. ಪ್ರದೀಪ್‌, ಐಕಾನ್‌ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಕವಿತಾ, ಎಂ.ಸಿ. ಗೋವಿಂದರಾಜು, ದೊಡ್ಡಬೋರಯ್ಯ, ಜೆ.ಬಿ. ಚನ್ನವೀರಯ್ಯ, ಶಾಖಾಧಿಕಾರಿ ಎಸ್‌.ಎಂ. ಕುಮಾರಸ್ವಾಮಿ, ನವೀನ್‌ಕುಮಾರ್‌, ಹನುಮೇಗೌಡ ಹಾಗೂ ಇತರರು ಇದ್ದರು.

‘ವಿದ್ವತ್ತು ಪ್ರದರ್ಶನ ಬಿಡಿ’

‘ವಿದ್ಯಾರ್ಥಿಗಳಿಗೆ ಓದಿನ ಅಭಿರುಚಿ ಹಾಗೂ ಉಪಯುಕ್ತತೆಯನ್ನು ತಿಳಿಸಬೇಕು. ಅವರ ಬಗ್ಗೆ ವಿಶೇಷ ಕಾಳಜಿ ವಹಿಸಿ ಬೋಧನೆ ಮಾಡಬೇಕು. ವಿದ್ಯಾರ್ಥಿಯ ಜ್ಞಾನದ ಮಟ್ಟಕ್ಕಿಳಿದು ಉಪನ್ಯಾಸಕರು ಬೋಧನೆ ಮಾಡಬೇಕು. ತನಗಿರುವ ವಿದ್ವತ್ತು ವಿದ್ಯಾರ್ಥಿಗಳ ಮುಂದೆ ಪ್ರದರ್ಶನ ಮಾಡುವುದಕ್ಕಲ್ಲ. ಪಾಠವು ವಿದ್ಯಾರ್ಥಿಯ ಆತ್ಮಸ್ಥೈರ್ಯ ತುಂಬುವಂತಿರಬೇಕು. ಪರೀಕ್ಷೆಗಳನ್ನು ಸುಲಲಿತವಾಗಿ ಬರೆದು ಉತ್ತೀರ್ಣರಾಗುವ ಆತ್ಮವಿಶ್ವಾಸವನ್ನು ಬೆಳೆಸಬೇಕು’ ಎಂದು ಎಚ್‌.ಡಿ. ಲಿಂಗರಾಜು ಕಿವಿಮಾತು ಹೇಳಿದರು.

ಪುನರಾವರ್ತನೆ ಮಾದರಿ ಪ್ರಶ್ನೆಪತ್ರಿಕೆಗಳ ಅಭ್ಯಾಸ ಘಟಕ ಪರೀಕ್ಷೆಗಳನ್ನು ನಡೆಸಿ ತಪ್ಪುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು. ಆಗ ಭಯರಹಿತ ಪರೀಕ್ಷೆ ಎದುರಿಸುವ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳವಣಿಗೆಯಾಗುತ್ತದೆ
– ಎಂ.ಪಿ. ನಾಗಮ್ಮ ಉಪ ನಿರ್ದೇಶಕಿ ಶಾಲಾ ಶಿಕ್ಷಣ ಇಲಾಖೆ ಬೆಂಗಳೂರು ದಕ್ಷಿಣ ಜಿಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.