ADVERTISEMENT

ಮರ ಕಡಿದಿರುವುದಕ್ಕೆ ಸಾರ್ವಜನಿಕರ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 13:45 IST
Last Updated 3 ಜುಲೈ 2019, 13:45 IST
ತಾಲ್ಲೂಕಿನ ಮಲ್ಲಿಗೆಮೆಟ್ಟಿಲು ರಸ್ತೆಯಲ್ಲಿ ಬೆಳೆದಿದ್ದ ಮರಗಳನ್ನು ಬೆಸ್ಕಾಂ ಇಲಾಖೆಯವರು ಕಡಿದಿರುವುದು
ತಾಲ್ಲೂಕಿನ ಮಲ್ಲಿಗೆಮೆಟ್ಟಿಲು ರಸ್ತೆಯಲ್ಲಿ ಬೆಳೆದಿದ್ದ ಮರಗಳನ್ನು ಬೆಸ್ಕಾಂ ಇಲಾಖೆಯವರು ಕಡಿದಿರುವುದು   

ಕನಕಪುರ:ಮರಳವಾಡಿ ಬಳಿಯ ಮಲ್ಲಿಗೆಮೆಟ್ಟಿಲು ರಸ್ತೆ ಬದಿಯಲ್ಲಿ ಬೃಹದಾಕಾರವಾಗಿ ಬೆಳೆದಿದ್ದ ಮರಗಳನ್ನು ಬೆಸ್ಕಾಂ ಇಲಾಖೆ ಕಡಿದು ಹಾಕಿರುವುದನ್ನು ಪರಿಸರವಾದಿ ಜಿ.ಪಿ.ಕಾಡೇಗೌಡ ಖಂಡಿಸಿದ್ದಾರೆ.

‘ರಸ್ತೆಯ ಎರಡೂ ಬದಿಯಲ್ಲಿ ಅರಣ್ಯ ಇಲಾಖೆ ವತಿಯಿಂದ ಐದು ವರ್ಷದ ಹಿಂದೆ ಸಸಿ ನೆಟ್ಟು, ಸಾಲು ಮರಗಳನ್ನು ಬೆಳೆಸಲಾಗಿತ್ತು. ಎತ್ತರಕ್ಕೆ ಬೆಳೆದಿದ್ದ ಮರಗಳನ್ನು ವಿದ್ಯುತ್‌ ತಂತಿಗೆ ತಾಕುತ್ತವೆ ಎಂಬ ನೆಪವೊಡ್ಡಿ ಕಡಿಯಲಾಗಿದೆ. ಸರ್ಕಾರ ಮರ ಬೆಳೆಸಲು ಸಾಕಷ್ಟು ಉತ್ತೇಜನ ನೀಡುತ್ತಿದೆ. ಜಾಗವಿರುವೆಡೆ ಸಸಿ ನೆಟ್ಟು ಬೆಳೆಸಬೇಕು ಎಂದು ಹೇಳುವ ಸಂದರ್ಭದಲ್ಲಿ, ಬೆಳೆದಿರುವ ಮರಗಳ ಮಾರಣ ಹೋಮ ಮಾಡುತ್ತಿರುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಈಗಾಗಲೇ ನೂರಾರು ಮರಗಳನ್ನು ಕಡಿಯಲಾಗಿದೆ. ಆದರೂ ಸಂಬಂಧಪಟ್ಟ ಅರಣ್ಯ ಇಲಾಖೆಯವರಾಗಲಿ, ಪಂಚಾಯಿತಿಯವರಾಗಲಿ ಮರ ಕಡಿಯುವುದನ್ನು ತಪ್ಪಿಸಿಲ್ಲ. ರಸ್ತೆ ಬದಿಯಲ್ಲಿ ಸಸಿ ನೆಡುವಾಗ ವಿದ್ಯುತ್‌ ಮಾರ್ಗ ತಪ್ಪಿಸಿ ನೆಡಬೇಕು. ಕೂಲಿ ನೀಡಿ, ಗುಂಡಿ ತೆಗೆಸಿ, ಲಕ್ಷಾಂತರ ರೂಪಾಯಿ ಖರ್ಚುಮಾಡಿ ಸಸಿ ನೆಟ್ಟು, ಹತ್ತಾರು ವರ್ಷ ಬೆಳೆಸಿದ ಮೇಲೆ ಅದನ್ನು ಕಡಿಯುವುದು ಯಾವ ನ್ಯಾಯ?’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಮೊದಲೇ ಸೂಕ್ತ ಸ್ಥಳ ಗುರುತಿಸಿ ಸಸಿ ನೆಡಬೇಕು. ಇಲಾಖೆಯವರು ವಿದ್ಯುತ್‌ ತಂತಿಗೆ ಸೋಕುವ ಮರದ ರೆಂಬೆಯನ್ನಷ್ಟೆ ಕತ್ತರಿಸಬೇಕು. ಬುಡದವರೆಗೂ ಕತ್ತರಿಸಿದರೆ ಮತ್ತೆ ಮರ ಬೆಳೆಯುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಮರಗಳನ್ನು ಕಡಿದಿರುವ ಸಂಬಂಧ ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ದಿನೇಶ್‌ ಅವರನ್ನು ಕೇಳಿದಾಗ ‘ವಿದ್ಯುತ್‌ ತಂತಿ ಮಾರ್ಗದ ಕೆಳಗೆ ಕಡಿಮೆ ಎತ್ತರದ, ವಿದ್ಯುತ್‌ ತಂತಿ ಮಾರ್ಗ ಇಲ್ಲದ ಕಡೆ ಎತ್ತರವಾಗಿ ಬೆಳೆಯುವ ಮರಗಳನ್ನು ಬೆಳೆಸಲಾಗುತ್ತಿದೆ. ಬೆಸ್ಕಾಂ ಇಲಾಖೆಯವರು ಮರ ಕಡಿದಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.