ADVERTISEMENT

ರಾಮನಗರ | ಪಿಯುಸಿ ಪರೀಕ್ಷೆ: 324 ಮಂದಿ ಗೈರು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 6:47 IST
Last Updated 2 ಮಾರ್ಚ್ 2024, 6:47 IST
ರಾಮನಗರದ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿ ವಿದ್ಯಾರ್ಥಿಗಳು
ರಾಮನಗರದ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಶುಕ್ರವಾರ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿ ವಿದ್ಯಾರ್ಥಿಗಳು   

ರಾಮನಗರ: ರಾಜ್ಯದಾದ್ಯಂತ ಶುಕ್ರವಾರದಿಂದ ಆರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಗೆ ಜಿಲ್ಲೆಯಲ್ಲಿ 324 ಮಂದಿ ಗೈರು ಹಾಜರಾದರು. ಪರೀಕ್ಷೆಗೆ ಜಿಲ್ಲೆಯಾದ್ಯಂತ ನೋಂದಾಯಿಸಿಕೊಂಡಿದ್ದ 7,166 ವಿದ್ಯಾರ್ಥಿಗಳ ಪೈಕಿ 6,842 ಮಂದಿ ಮೊದಲ ದಿನ ಪರೀಕ್ಷೆ ಬರೆದರು.

ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ರಾಮನಗರದ ಐದು, ಚನ್ನಪಟ್ಟಣದ ಮೂರು, ಕನಕಪುರದ ಎರಡು, ಮಾಗಡಿ ಎರಡು ಹಾಗೂ ಹಾರೋಹಳ್ಳಿ ಒಂದು ಕೇಂದ್ರ ಸೇರಿದಂತೆ ಒಟ್ಟು 13 ಕಡೆ ಪರೀಕ್ಷೆ ನಡೆಯಿತು. ಕನಕಪುರದ ಮುನ್ಸಿಪಲ್ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಅತಿ ಹೆಚ್ಚು 71 ವಿದ್ಯಾರ್ಥಿಗಳು, ರೂರಲ್ ಪಿಯು ಕಾಲೇಜು ಕೇಂದ್ರದ 66 ಹಾಗೂ ಮಾಗಡಿಯ ಸರ್ಕಾರಿ ಪಿಯು ಕಾಲೇಜು ಕೇಂದ್ರದ 30 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.

‘ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. ಯಾವ ಕೇಂದ್ರದಲ್ಲೂ ಅಹಿತಕರ ಘಟನೆ ನಡೆದಿಲ್ಲ. ವಿಶೇಷ ಜಾಗೃತ ದಳವು ಅಕ್ರಮಕ್ಕೆ ಅವಕಾಶವಿಲ್ಲದಂತೆ ಎಲ್ಲ ಕೇಂದ್ರಗಳ ಮೇಲೆ ನಿಗಾ ಇಟ್ಟಿತ್ತು. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು’ ಎಂದು ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ಉಪ ನಿರ್ದೇಶಕಿ ನಾಗಮ್ಮ ಎಂ.ಪಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ, ಮುನ್ನೆಚ್ಚರಿಕೆ ಕ್ರಮವಾಗಿ ಜಿಪಿಎಸ್ ಅಳವಡಿಸಿದ ವಾಹನಗಳಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಪತ್ರಿಕೆಗಳನ್ನು ಕೇಂದ್ರಗಳಿಗೆ ತಲುಪಿಸಲಾಗುತ್ತದೆ. ಈ ಸಲ ಪರೀಕ್ಷೆ ಬರೆಯುತ್ತಿರುವವರಲ್ಲಿ ವಿಜ್ಞಾನ ವಿಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.