ADVERTISEMENT

ಅಂಗನವಾಡಿ ಮಕ್ಕಳಿಗೆ ಶುದ್ಧ ನೀರು ಪೂರೈಕೆ

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಾಮಕೃಷ್ಣ ಕ್ರಮಕ್ಕೆ ಮೆಚ್ಚುಗೆ

ಎಚ್.ಎಂ.ರಮೇಶ್
Published 23 ಜನವರಿ 2019, 13:30 IST
Last Updated 23 ಜನವರಿ 2019, 13:30 IST
ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿ ಅಂಗನವಾಡಿ ಘಟಕ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಉಚಿತವಾಗಿ ನೀರಿನ ಕ್ಯಾನ್‌ಗಳನ್ನು ಇಒ ರಾಮಕೃಷ್ಣ ಅವರು ವಿತರಿಸಿದರು
ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿ ಅಂಗನವಾಡಿ ಘಟಕ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಉಚಿತವಾಗಿ ನೀರಿನ ಕ್ಯಾನ್‌ಗಳನ್ನು ಇಒ ರಾಮಕೃಷ್ಣ ಅವರು ವಿತರಿಸಿದರು   

ಚನ್ನಪಟ್ಟಣ: ತಾಲ್ಲೂಕಿನ ಎಲ್ಲ ಅಂಗನವಾಡಿ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ. ತಾಲ್ಲೂಕಿನ 32 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 350 ಅಂಗನವಾಡಿ ಕೇಂದ್ರಗಳಿದ್ದು, ಎಲ್ಲ ಅಂಗನವಾಡಿ ಕೇಂದ್ರಗಳಿಗೂ ಪ್ರತಿದಿನ ಒಂದು ಕ್ಯಾನ್ ಶುದ್ಧ ನೀರು ಪೂರೈಕೆ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದುತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ (ಇಒ) ರಾಮಕೃಷ್ಣ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಮಲ್ಲೈ ಮುಹಿಲಿನ್ ಅವರು ವೈಯಕ್ತಿಕ ಕಾಳಜಿ ವಹಿಸಿ ಜಿಲ್ಲೆಯ ಎಲ್ಲ ಅಂಗನವಾಡಿ ಮಕ್ಕಳಿಗೆ ಕುಡಿಯಲು ಶುದ್ಧ ನೀರನ್ನು ಪೂರೈಸುವಂತೆ ತಿಳಿಸಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

‘ಆಯಾಯ ಗ್ರಾಮ ಪಂಚಾಯಿತಿ ಅಡಿಯಲ್ಲಿ ಕಾರ್ಯನಿರ್ವಹಿಸುವ ವಾಟರ್‌ಮನ್‌ಗಳು ಪ್ರತಿದಿನ ಒಂದು ಕ್ಯಾನ್ ಶುದ್ಧ ನೀರನ್ನು ಅಂಗನವಾಡಿಗಳಿಗೆ ಪೂರೈಸಲು ಪಿಡಿಒಗಳಿಗೆ ಸೂಚಿಸಲಾಗಿದೆ. ಇದು ಯಾವುದೇ ಕಾರಣಕ್ಕೂ ನಿಲ್ಲಬಾರದು’ ಎಂದು ತಿಳಿಸಿದ್ದಾರೆ.

ADVERTISEMENT

‘ಮಕ್ಕಳಿಗೆ ರೋಗ ರುಜಿನಗಳು ಹರಡುವುದು ಕುಡಿಯುವ ನೀರಿನಿಂದ. ಕೊಳವೆ ಬಾವಿ ನೀರನ್ನು ಉಪಯೋಗಿಸುವುದರಿಂದ ಅದರಲ್ಲಿ ಖನಿಜಾಂಶಗಳು ಹೆಚ್ಚಾಗಿದ್ದು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದೇ ಹೆಚ್ಚು. ಹಾಗಾಗಿ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಶುದ್ಧ ನೀರು ಪೂರೈಸುವ ಕ್ರಮ ತೆಗೆದುಕೊಳ್ಳಲಾಗುತ್ತಿದೆ’ ಎಂದರು.

‘ಸಾಂಕ್ರಾಮಿಕ ರೋಗಗಳು ಹರಡಿ ಅನಂತರ ಮಕ್ಕಳ ಆರೋಗ್ಯ ಹದಗೆಟ್ಟು ಮುತುವರ್ಜಿ ವಹಿಸುವ ಬದಲು, ಯಾವುದೇ ರೋಗ ರುಜಿನ ಬಾರದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವ ಉದ್ದೇಶದಿಂದ ಸಿಇಒ ಅವರ ಸೂಚನೆಯನ್ನು ಪಾಲಿಸಲಾಗುತ್ತಿದೆ’ ಎಂದರು.

‘ತಾಲ್ಲೂಕಿನ ಹುಣಸನಹಳ್ಳಿ ಘಟಕ ವ್ಯಾಪ್ತಿಯ ಆರು ಅಂಗನವಾಡಿ ಕೇಂದ್ರಗಳಿಗೆ ಒಂದೊಂದು ಕ್ಯಾನ್ ನೀರನ್ನು ಉಚಿತವಾಗಿ ನೀಡಲಾಗಿದೆ. ಹಂತ ಹಂತವಾಗಿ ತಾಲ್ಲೂಕಿನ 350 ಕೇಂದ್ರಗಳಿಗೂ ಕ್ಯಾನ್‌ಗಳನ್ನು ವಿತರಿಸಲಾಗುವುದು. ನೀರು ಪೂರೈಸಲು ಗ್ರಾಮ ಪಂಚಾಯಿತಿ ಪಿಡಿಒಗಳು ಕ್ರಮ ವಹಿಸಬೇಕು’ ಎಂದರು.

’ಸಿಇಒ ಅವರು ನಾಲ್ಕು ತಾಲ್ಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳಿಗೂ ಶುದ್ಧ ನೀರು ಪೂರೈಸಲು ಆಯಾಯ ತಾಲ್ಲೂಕಿನ ಇಒಗಳಿಗೆ ಸೂಚಿಸಿದ್ದಾರೆ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹುಣಸನಹಳ್ಳಿಯಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದು ಎಲ್ಲಡೆಗೆ ವಿಸ್ತಾರವಾಗಲಿದೆ. ಅಂಗನವಾಡಿ ಕಾರ್ಯಕರ್ತೆಯರು ಈ ನೀರನ್ನು ಮಕ್ಕಳಿಗೆ ಕುಡಿಯಲು ಮಾತ್ರ ಬಳಸಬೇಕು’ ಎಂದರು.

ಅಂಗನವಾಡಿ ಮಕ್ಕಳಿಗೆ ಶುದ್ಧ ನೀರು ಪೂರೈಸಲು ಇಒ ರಾಮಕೃಷ್ಣ ಅವರು ತೆಗೆದುಕೊಂಡಿರುವ ಕ್ರಮ ನಿಜಕ್ಕೂ ಶ್ಲಾಘನೀಯ. ಇಂತಹ ಕಾರ್ಯಗಳನ್ನು ಮಾಡಲು ಅಧಿಕಾರಿಗಳು ಮುಂದಾಗಲಿ ಎಂದು ಮುಖಂಡರಾದ ಕೋಡಂಬಹಳ್ಳಿ ನಾಗರಾಜು, ಮಂಗಾಡಹಳ್ಳಿ ಎಂ.ಜೆ.ಮಹೇಶ್ ಪ್ರಶಂಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.