
ರಾಮನಗರ: ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲು ಉದ್ದೇಶಿಸಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.
ತಾಲ್ಲೂಕಿನ ಗೋಪಹಳ್ಳಿ ಸರ್ಕಾರಿ ಶಾಲಾ ಆವರಣದಲ್ಲಿ ಬಾಷ್ ಇಂಡಿಯಾ ಕಂಪೆನಿ ಸಿಎಸ್ ಆರ್ ನಿಧಿಯಡಿ ₹8ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕರ್ನಾಟಕ ಪಬ್ಲಿಕ್ ಶಾಲಾ ಕಟ್ಟಡಕ್ಕೆ ಶನಿವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಗೋಪಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ 23 ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಶಾಲೆಗಳಲ್ಲಿನ ದಾಖಲಾತಿ ಹಾಗೂ ನಿಯೋಜಿತ ಶಿಕ್ಷಕರ ಸಂಖ್ಯೆ, ಕೊಠಡಿ ಸಂಖ್ಯೆ ಗಮನಿಸಿದಾಗ ಯಾವುದೇ ಖಾಸಗಿ ಶಾಲೆಗಳಲ್ಲಿ ಸಿಗದಂತಹ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಪಬ್ಲಿಕ್ ಶಾಲೆಯಲ್ಲಿ ಪ್ರಯೋಗಾಲಯ, ಕ್ರೀಡೆ, ಕಂಪ್ಯೂಟರ್, ಇಂಗ್ಲಿಷ್, ಗಣಿತ, ವಿಜ್ಞಾನ ಎಲ್ಲ ವಿಭಾಗಗಳಿಗೂ ಆದ್ಯತೆ ನೀಡಲಾಗಿದೆ. ಮಕ್ಕಳನ್ನು ಮನೆ ಬಾಗಿಲಿಗೆ ತಲುಪಿಸಲು ಸಾರಿಗೆ ವ್ಯವಸ್ಥೆ ಮಾಡಲಾಗುವುದು. ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಕಡೆ ಗುಣಮಟ್ಟದ ಶಿಕ್ಷಣ ನೀಡುವುದು ಪ್ರಮುಖ ಉದ್ದೇಶವಾಗಿದೆ. ಇದು ಮಕ್ಕಳ ಭವಿಷ್ಯಕ್ಕ ಭದ್ರ ಬುನಾದಿ ಹಾಕುವ ಪ್ರಯತ್ನವಷ್ಟೇ ಹೊರತು ಇನ್ನಾವ ಲಾಭ ನಷ್ಟದ ವಿಚಾರವಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕ ಎಚ್.ಸಿ.ಬಾಲಕೃಷ್ಣ, ಗ್ರಾ.ಪಂ.ಅಧ್ಯಕ್ಷೆ ಸರೋಜ ನಾಗರಾಜು, ಉಪಾಧ್ಯಕ್ಷ ಹುಲಿಯಪ್ಪ, ಜಿಬಿಡಿಎ ಅಧ್ಯಕ್ಷ ಜಿ.ಎನ್.ನಟರಾಜು, ಪುರಸಭೆ ಸದಸ್ಯ ಸಿ.ಉಮೇಶ್, ಬಾಷ್ ಇಂಡಿಯಾ ಕಂಪೆನಿ ತಾಂತ್ರಿಕ ವಿಭಾಗದ ಮುಖ್ಯಸ್ಥ ರಾಜೇಂದ್ರ, ಸುರೇಶ್ ಕಲ್ಮಾಡಿ, ಪುಂಡಲೀಕ ಕಾಮತ್, ಡಿಡಿಪಿಐ ಸ್ವಾಮಿ, ತಹಶೀಲ್ದಾರ್ ತೇಜಸ್ವಿನಿ, ಬಿಇಒ ಸೋಮಲಿಂಗಯ್ಯ, ಬಿಡದಿ ಕೂಟಗಲ್ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಗೌಡ, ಪ್ರಮುಖರಾದ ಬೆಟ್ಟಸ್ವಾಮಿ, ಸಿ.ಪುಟ್ಟಯ್ಯ, ರಮೇಶ್, ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಸುಮಾರು 50 ಪಬ್ಲಿಕ್‌ಗಳಾಗಲಿವೆ. ರಾಮನಗರದಲ್ಲಿ 5 ಕನಕಪುರದಲ್ಲಿ 8 ಮಾಗಡಿಯಲ್ಲಿ 5 ಹಾಗೂ ಚನ್ನಪಟ್ಟಣ ಮತ್ತು ಹಾರೋಹಳ್ಳಿ ತಾಲ್ಲೂಕುಗಳಲ್ಲಿ ತಲಾ ಎರಡು ಶಾಲೆಗಳು ಸ್ಥಾಪನೆಯಾಗುತ್ತಿವೆಸುರೇಶ್ ಬಮೂಲ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.